೨೨ ಸಾವಿರ ಮಳಿಗೆ ತೆರವಿಗೆ ಪಾಲಿಕೆ ನಿರ್ಧಾರ

ಬೆಂಗಳೂರ, ಮಾ.೬- ಪಾದಚಾರಿ ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಮೀಸಲಿಡದ ಜಾಗದಲ್ಲಿ ವ್ಯಾಪಾರ ನಡೆಸುತ್ತಿರುವ ೨೨ ಸಾವಿರ ಮಳಿಗೆಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.ತಮಗೆ ಗೊತ್ತುಪಡಿಸದ ಜಾಗದಲ್ಲಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದ್ದು, ಅದರಂತೆ ಎಂಟು ವಲಯಗಳಲ್ಲಿ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೨೦,೫೦೦ ವ್ಯಾಪಾರ ಘಟಕಗಳನ್ನು ಬಿಬಿಎಂಪಿ ಗುರುತಿಸಿದೆ.ಅವುಗಳಲ್ಲಿ ೧೩೨ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇನ್ನೂ ೧೬,೪೪೯ ಕ್ಕೆ ನೋಟಿಸ್‌ಗಳನ್ನು ನೀಡಲಾಗಿದೆ.ವಸತಿ ಪ್ರದೇಶಗಳಲ್ಲಿ ೪೦ ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ ನಡೆಯುವ ವ್ಯಾಪಾರ ಸಂಸ್ಥೆಗಳಿಗೆ ಪಾಲಿಕೆ ಕಡಿವಾಣ ಹಾಕಲಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಹೇಳಿತ್ತು.
ಕಾನೂನು ಬಾಹಿರ ಮಳಿಗೆಗಳ ಪೈಕಿ ದಕ್ಷಿಣ ವಲಯದಲ್ಲಿಯೇ ಕಾಲು ಭಾಗಕ್ಕಿಂತ ಹೆಚ್ಚಿಗೆ ಇವೆ. ನಂತರ ಪೂರ್ವ ವಲಯದಲ್ಲೂ ಅಧಿಕವಾಗಿದ್ದು, ಒಟ್ಟಾರೆಯಾಗಿ, ಬಿಬಿಎಂಪಿ ೧೬,೫೮೧ ಘಟಕಗಳ ಮೇಲೆ ಕಾರ್ಯನಿರ್ವಹಿಸಲು ತಯಾರಿ ನಡೆಸಿದೆ.
ಮತ್ತೊಂದೆಡೆ, ಪಾಲಿಕೆಯೂ ಏಕಾಏಕಿ ತೆರವುಗೊಳಿಸುತ್ತಿರುವ ಕ್ರಮವನ್ನು ಖಂಡಿಸಿರುವ ವ್ಯಾಪಾರಿಗಳ ಸಮುದಾಯವು, ಈ ಸಂಬಂಧ ಬಿಬಿಎಂಪಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಹ ದಾಖಲಿಸಿದ್ದಾರೆ.
ಆದರೆ, ಹೈಕೋರ್ಟ್ ಆದೇಶದ ಮೇಲೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಒಂಬತ್ತು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದು, ಏಕೆ ಎಂಬುದು ಸ್ಪಷ್ಟವಾಗಿಲ್ಲ.