೨೨೦೦ ನೌಕರರ ಕಡಿತಕ್ಕೆ ಕೋಕೋಕೋಲಾ ನಿರ್ಧಾರ

ಬ್ಲೂಂಬರ್ಗ್, ಡಿ. ೧೮. ಕೋಕೋ ಕೋಲಾ ಕಂಪನಿ ವಿಶ್ವದಾದ್ಯಂತ ತಾನು ಹೊಂದಿರುವ ನೌಕರರ ಪೈಕಿ ೨೨೦೦ ನೌಕರರ ಸಂಖ್ಯೆಯನ್ನು ಕಡಿತ ಮಾಡುವುದಾಗಿ ಹೇಳಿದೆ.

ಅಮೆರಿಕದಲ್ಲಿ ಸಾವಿರದಿನ್ನೂರು ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವ ೨೨೦೦ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲು ತೀರ್ಮಾನಿಸಿರುವುದಾಗಿ ಕಂಪನಿ ಹೇಳಿದೆ.

ಸೋಡಾ ತಯಾರಿಸುವ ಕಂಪನಿ ಪುನರ್ರಚನೆ ಪ್ರಕ್ರಿಯೆ ಹಾಗೂ ತಂಪುಪಾನೀಯಗಳ ಮಾರಾಟ ಪ್ರಮಾಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ವಿಶೇಷವಾಗಿ ಚಲನಚಿತ್ರ ಮಂದಿರ, ಬಾರ್ ಮತ್ತು ಕ್ರೀಡಾಂಗಣಗಳಲ್ಲಿ ಮಾರಾಟ ಕಡಿಮೆಯಾಗಿರುವುದರಿಂದ ಇದು ಅನಿವಾರ್ಯ ಎಂಬ ಮಾಹಿತಿಯನ್ನು ನೀಡಲಾಗಿದೆ.

ಕೋವಿಡ್ ೧೯ ಸಾಂಕ್ರಾಮಿಕ ದಿಂದಾಗಿ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಒಟ್ಟಾರೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಪೈಕಿ ಶೇಕಡ ೨.೫ ರಷ್ಟು ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ .

ಅಮೆರಿಕದಲ್ಲಿ ೧೦೪೦೦ ನೌಕರರು ಸೇರಿದಂತೆ ಒಟ್ಟಾರೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ೮೬ ಸಾವಿರದ ೨೦೦ ನೌಕರರು ಕೆಲಸ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಹಕರ ಅಗತ್ಯ ಮತ್ತು ಇತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯಲ್ಲಿ ಪುನರಚನಾ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದಿಂದ ಕಂಪನಿಯ ಬೆಳವಣಿಗೆಯ ವೇಗ ಕಡಿಮೆಯಾಗಿದೆ ಮತ್ತು ಹಲವು ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.