೨೦ ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟಕ್ಕೆ ಸಿದ್ಧತೆ

ನವದೆಹಲಿ, ಜು. ೧೮-ಈ ಬಾರಿ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶದಾದ್ಯಂತ ೨೦ ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಯಡಿಯಲ್ಲಿ ಮುಂದಿನ ಮೂರು ತಿಂಗಳ ಕಾಲ ದೇಶದಾದ್ಯಂತ ೨೦ ಕೋಟಿಗೂ ಹೆಚ್ಚು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಸಲಾಗುತ್ತದೆ.
ಸ್ವಾತಂತ್ರ್ಯದ ಅಮೃತ್ಸ ಮಹೋತ್ಸವದ ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರ ಜೊತೆ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಆಗಸ್ಟ್ ೧೩ ರಿಂದ ೧೫ರವರೆಗೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು. ಈ ಅಭಿಯಾನದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಭಾಗಿಯಾಗಲಿವೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಜುಲೈ ೨೨ ರಿಂದ ಎಲ್ಲ ರಾಜ್ಯ ಸರ್ಕಾರದ ವೆಬ್ ಸೈಟ್ ಮುಖಪುಟಗಳಲ್ಲಿ ರಾಷ್ಟ್ರಧ್ವಜ ಕಾಣಿಸಿಕೊಳ್ಳಬೇಕು. ನಾಗರೀಕರು ತಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ಟಿಟರ್ ಹಾಗೂ ಇತರ ಸಾಮಾಗ್ರಿಕ ಮಾಧ್ಯಮಗಳ ಖಾತೆಗಳಲ್ಲಿ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.