ನವದೆಹಲಿ,ಸೆ.೨೧- ಮುಂದಿನ ವರ್ಷ ಲೋಕಸಭೆ ಚುನಾವಣೆ ನಂತರ ಜನಗಣತಿ, ಪುನರ್ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಮಹಿಳಾ ಮೀಸಲಾತಿ ಮಸೂದೆ ೨೦೨೯ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ ರಷ್ಟು ಮೀಸಲಾತಿ ಕಲ್ಪಿಸುವ ಮಹಿಳಾ ಮೀಸಲಾತಿ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು ರಾಜ್ಯಸಭೆಯಲ್ಲಿ ಅಂಗೀಕಾರವಾಗಬೇಕಿದೆ.ಈ ನಡುವೆ ಸುದ್ದಿಗಾರೊಂದಿಗೆ ಅಮಿತ್ ಶಾ ಮಹಿಳಾ ಕೋಟಾ ಜಾರಿ ಮಾಡುವ ಸಮಯದ ಬಗ್ಗೆ ರಾಜಕೀಯ ಪಕ್ಷಗಳಲ್ಲಿದ್ದ ಆತಂಕವನ್ನು ನಿವಾರಿಸಿದ್ದಾರೆ.
೨೦೨೪ ರ ಲೋಕಸಭೆ ಚುನಾವಣೆಯ ನಂತರ ದಶವಾರ್ಷಿಕ ಜನಗಣತಿ ಮತ್ತು ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದರಿಂದ ೨೦೨೯ ರ ವೇಳೆಗೆ ಕಾನೂನು ಜಾರಿಯಾಗಲಿದೆ ಎಂದಿದ್ದಾರೆ.ವಿಧೇಯಕದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಆರಂಭದಲ್ಲಿಸರಿಪಡಿಸಲಾಗುವುದು. “ಮುಂದಿನ ಸರಕಾರ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ” ಎಂದು ಹೇಳಿದ್ದಾರೆ.
ವಿಪಕ್ಷಗಳಿಗೆ ತಿರುಗೇಟು
ವಿರೋಧ ಪಕ್ಷಗಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರಿ “ಒಬಿಸಿ ಸಬಲೀಕರಣದ ರಾಗವನ್ನು ನುಡಿಸಲು ಪ್ರಾರಂಭಿಸಿರುವ” ವಿರೋಧ ಪಕ್ಷಗಳು ಎಂದಿಗೂ ತಮ್ಮ ಪಕ್ಷದಲ್ಲಿ ಹಿಂದುಳಿದ ವರ್ಗದ ಪ್ರಧಾನಿಯನ್ನು ಮಾಡಿಲ್ಲ ಆದರೆ ಬಿಜೆಪಿ ಹಿಂದುಳಿದ ವರ್ಗದ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಿದೆ ಎಂದು ತಿರುಗೇಟು ನೀಡಿದ್ದಾರೆ.
ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅನುಮಾನಗಳನ್ನು ಹೋಗಲಾಡಿಸಲು ಮಹಿಳೆಯರಿಗೆ ಮೀಸಲಿಡಬೇಕಾದ ಕ್ಷೇತ್ರಗಳನ್ನು ಗುರುತಿಸುವ ಕಾರ್ಯವನ್ನು ಪುನರ್ ವಿಂಗಡಣೆ ಆಯೋಗಕ್ಕೆ ಬಿಡಬೇಕು ಎಂದು ಹೇಳಿದ್ದಾರೆ.ವಯನಾಡು ಮತ್ತು ಹೈದರಾಬಾದ್ (ಮಹಿಳೆಯರಿಗೆ) ಮೀಸಲಾಗಿದ್ದರೆ, ಸರ್ಕಾರವನ್ನು ದೂಷಿಸ ಬಾರದು ಎಂದು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು.
“ಬಿಜೆಪಿ ೩೬೫ ಒಬಿಸಿ ಶಾಸಕರನ್ನು ಹೊಂದಿದೆ, ಇದು ಅದರ ಒಟ್ಟು ಬಲದ ೧,೩೫೮ ಶೇಕಡಾ ೨೭ ರಷ್ಟು ಆಗಿದರ. ಇದು ಇತರ ಪಕ್ಷಗಳಲ್ಲಿನ ಒಬಿಸಿ ಶಾಸಕರ ಸಂಖ್ಯೆಗಿಂತ ಹೆಚ್ಚು. ಬಿಜೆಪಿಯಲ್ಲಿ ಒಬಿಸಿ ಎಂಎಲ್‌ಸಿಗಳ ಒಟ್ಟು ಸಂಖ್ಯೆ ೧೬೩ ರಲ್ಲಿ ೬೫ ಆಗಿದೆ. ಶೇಕಡಾ ೪೦ ರಷ್ಟಿದೆ” ಎಂದು ಅವರು ಹೇಳಿದ್ದಾರೆ.