೨೦೨೫ರ ವೇಳೆಗೆ ಕ್ಷಯ ಮುಕ್ತ ಜಿಲ್ಲೆಗೆ ಸಂಕಲ್ಪ

ಕೆ.ಆರ್.ಪುರ,ಮಾ.೨೫- ಜಿಲ್ಲೆಯನ್ನು ೨೦೨೫ರ ವೇಳೆಗೆ ಕ್ಷಯರೋಗಮುಕ್ತ ಜಿಲ್ಲೆಯಾಗಿಸುವುದು ನಮ್ಮ- ನಿಮ್ಮೆಲ್ಲರ ಮುಖ್ಯಗುರಿಯಾಗಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕರೆ ನೀಡಿದ್ದಾರೆ.
ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಪೂರ್ವ ತಾಲ್ಲಕಿನ ಕಣ್ಣೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಕ್ಷಯರೋಗ ದಿನಾಚರಣೆ ಹಮ್ಮಿಕೊಂಡಿದ್ದು ಇದರ ಮೂಲ ಉದ್ದೇಶ ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿ ಈ ರೋಗದ ಬಗ್ಗೆ ಜನರಿಗೆ ಮಾಹಿತಿ ಕೊಡುವುದರ ಜೊತೆಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು .
ಪ್ರಪಂಚದ ರೋಗಿಗಳಲ್ಲಿ ಕಾಲು ಭಾಗದಷ್ಟು ರೋಗಿಗಳು ಭಾರತದ ದೇಶದಲ್ಲಿ ಕಂಡುಬರುತ್ತಾರೆ. ೨೦೨೦ರ ಟಿಬಿ ವರದಿ ಪ್ರಕಾರ ಭಾರತದಲ್ಲಿ ೨೪.೦೪ ಲಕ್ಷ ರೋಗಿಗಳು ನಿಕ್ಷಯ್‌ನಲ್ಲಿ ನೋಂದಣಿ ಆಗಿದ್ದಾರೆ. ದೇಶದಲ್ಲಿ ಶೇ. ೪೦ ರಷ್ಟು ಜನರಲ್ಲಿ ಈ ರೋಗಾಣುಗಳಿರುತ್ತವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ಐದು ನಿಮಷಕ್ಕೆ ಇಬ್ಬರು ಕ್ಷಯರೋಗದಿಂದ ಮರಣ ಹೊಂದುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಕ್ಷಯರೋಗ ಪತ್ತೆ ಪ್ರಮಾಣವು ನಮ್ಮ ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಜನ ಸಂಖ್ಯೆಗೆ ೧೩೬ ಸರಾಸರಿ ಇದೆ ಎಂದರು. ಕ್ಷಯರೋಗ ಗುಣಪಡಿಸುವಲ್ಲಿ ಶೇ. ೧೦೦ ರಷ್ಟು ಸಾಧನೆಯಾಗಬೇಕು ಎಂದ ಜಿಲ್ಲಾಧಿಕಾರಿಗಳು ಒಂದು ಲಕ್ಷ ಜನಸಂಖ್ಯೆಗೆ ೧೦ ಕೇಸ್‌ಗಿಂತ ಕಡಿಮೆ ಪ್ರಮಾಣದಲ್ಲಿ ರೋಗ ಪತ್ತೆಯಾಗುವಂತೆ ಕ್ರಮವಹಿಸಲು ಎಲ್ಲರೂ ಶ್ರಮಿಸಬೇಕಿದೆ. ಅಲ್ಲದೆ, ಈ ರೋಗದಿಂದ ಯಾವುದೇ ಸಾವು – ನೋವು ಸಂಭವಿಸದಂತೆ ಎಚ್ಚರವಹಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆಯಲ್ಲಿ ಜ್ವರ, ಬೆವರುವುದು, ಕಫದಲ್ಲಿ ರಕ್ತ, ತೂಕ ಇಳಿಕೆ, ಹಸಿವಾಗದಿರುವುದು ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ. ಮಹೇಶ್ ಕುಮಾರ್, ಪೂರ್ವ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ. ಚಂದ್ರಶೇಖರಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶ್ರೀನಿವಾಸ ಜಿ.ಎ. ಕಣ್ಣೂರಿನ ಪ್ರಾಥಮಿಕ ಆರೋಗ್ಯಾಧಿಕಾರಿಯಾದ ಉಮಾ ರಾಕೇಶ್, ಗ್ರಾ ಪಂ.ಅಧ್ಯಕ್ಷರಾದ ಅಕ್ಕಯ್ಯಮ್ಮ ಇದ್ದರು.