೨೦೨೪ರ ಬಳಿಕ ಐಎಸ್‌ಎಸ್‌ನಿಂದ ರಷ್ಯಾ ನಿರ್ಗಮನ!

ಮಾಸ್ಕೋ, ಜು.೨೭- ವಿಶ್ವದ ಪ್ರಸಿದ್ಧ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಒಂದಾಗಿರುವ ರಷ್ಯಾದ ರೊಸ್ಕೊಮೋಸ್ ಇದೀಗ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದು, ಅಚ್ಚರಿಗೆ ಕಾರಣವಾಗಿದೆ. ೨೦೨೪ರ ಬಳಿಕ ತಾನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಿಂದ ನಿರ್ಗಮಿಸುವುದಾಗಿ ನಿರ್ಧಾರ ಪ್ರಕಟಿಸಿದೆ.
ಉಕ್ರೇನ್ ಮೇಲಿನ ದಾಳಿಯ ಬಳಿಕ ಅಮೆರಿಕಾ, ಯುರೋಪ್ ಸೇರಿದಂತೆ ಹಲವು ಕಡೆಗಳಿಂದ ರಷ್ಯಾದ ಮೇಲೆ ಕಠಿಣ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿಯೇ ಇದೀಗ ರೊಸ್ಕೊಮೋಸ್ ಐಎಸ್‌ಎಸ್‌ನಿಂದ ನಿರ್ಗಮಿಸುವ ಹೇಳಿಕೆ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೊಸ್ಕೊಮೋಸ್ ಅಧ್ಯಕ್ಷ ಯೂರಿ ಬೊರಿಸೊವ್, ಖಂಡಿತವಾಗಿಯೂ ನಾವು ನಮ್ಮ ಪಾಲುದಾರರ ಜೊತೆಗಿನ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಲಿದ್ದೇವೆ. ಆದರೆ ೨೦೨೪ರ ಬಳಿಕ ಐಎಸ್‌ಎಸ್‌ನಿಂದ ನಿರ್ಗಮಿಸುತ್ತೇವೆ. ಬಹುಶಃ ೨೦೨೪ರ ವೇಳೆಗೆ ನಾವು ರಷ್ಯಾ ಕಕ್ಷೀಯ ನಿಲ್ದಾಣವನ್ನು ಒಟ್ಟುಗೂಡಿಸಲು ಪ್ರಾರಂಭಿಸುವ ವಿಶ್ವಾಸವಿದೆ. ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ನಾವು ಮುಖ್ಯ ಆದ್ಯತೆ ನೀಡಲಿದ್ದೇವೆ. ಸದ್ಯ ಬಾಹ್ಯಾಕಾಶ ಉದ್ಯಮವು ಕಠಿಣ ಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಜುಲೈ ಮಧ್ಯಂತರ ವೇಳೆಗೆ ರೊಸ್ಕೊಮೋಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬೋರಿಸೊವ್ ಈಗಾಗಲೇ ಈ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜೊತೆ ಮಾತನಾಡಿದ್ದಾರೆ. ಬಳಿಕ ರೊಸ್ಕೊಮೋಸ್ ನಿರ್ಧಾರಕ್ಕೆ ಪುತಿನ್ ಸಮ್ಮತಿ ಸೂಚಿಸಿದ್ದಾರೆ. ೧೯೬೧ರಲ್ಲಿ ಬಾಹ್ಯಾಕಾಶಕ್ಕೆ ಮೊತ್ತ ಮೊದಲ ಬಾರಿಗೆ ಮಾನವನ್ನು ಕಳುಹಿಸಿದ ಕೀರ್ತಿಗೆ ರೊಸ್ಕೊಮೋಸ್‌ಗೆ ಸಲ್ಲುತ್ತದೆ. ಬಳಿಕ ೧೯೯೮ರಲ್ಲಿ ಐಎಸ್‌ಎಸ್ ಸ್ಥಾಪಿಸಲಾಗಿದ್ದು, ರಷ್ಯಾ ಹಾಗೂ ಅಮೆರಿಕಾ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ೨೦೨೪ರ ಬಳಿಕ ರಷ್ಯಾ ನಿರ್ಗಮಿಸುತ್ತಿರುವುದು ಸಹಜವಾಗಿಯೇ ಬಾಹ್ಯಾಕಾಶ ಕ್ಷೇತ್ರಕ್ಕೆ ಹಿನ್ನಡೆ ತಂದಿದೆ.