೨೦೦ ಕೋಟಿ ಲಸಿಕೆ: ಮೋದಿ ಅಭಿನಂದನಾ ಪತ್ರ

ನವದೆಹಲಿ, ಜು.೨೦- ಕೋವಿಡ್‌ಗೆ ನೀಡಲಾಗುವ ಲಸಿಕೆ ೨೦೦ ಕೋಟಿ ತಲುಪಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ನೀಡಿದ ಎಲ್ಲ ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ಬರೆದಿದ್ದಾರೆ.
ಜುಲೈ ೧೭ ರಂದು ಲಸಿಕೆಯ ೨೦೦ ಕೋಟಿ ಡೋಸ್ ನೀಡಿದ ಹೆಗ್ಗುರುತನ್ನು ಸಾಧಿಸಿದೆ. ಈ ಮಹತ್ತರ ಕಾರ್ಯದಲ್ಲಿ ಪಾಲುದಾರರಾಗಿರುವ ಲಸಿಕೆ ನೀಡಿದ ನೋಂದಾಯಿತರಿಗೆ ವೈಯಕ್ತಿಕವಾಗಿ ಅಭಿನಂದನಾ ಪತ್ರವನ್ನು ಪ್ರಧಾನಿ ಮೋದಿ ಬರೆದಿದ್ದಾರೆ.
ಕೋವಿಡ್ ತಡೆಗೆ ನೀಡಲಾಗುತ್ತಿರುವ ಕೊರೊನಾ ಲಸಿಕೆ ಡೋಸ್ ೨೦೦ ಕೋಟಿ ಮೈಲುಗಲ್ಲು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿದ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದಿಸಿದ್ದಾರೆ.
೨೦೨೧ ರ ಜನವರಿ ೧ ರಂದು ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು. ೨೦೨೧ರ ಜನವರಿ ೧೬ ರಿಂದ ದೇಶಾದ್ಯಂತ ಕೋವಿನ್ ವೇದಿಕೆಯ ಮೂಲಕ ಲಸಿಕಾಭಿಯಾನ ಶುರುವಾಗಿತ್ತು.