೨೦೦ ಕೆ.ಜಿ. ಗಾಂಜಾ ಸಾಗಾಟ: ನಾಲ್ವರ ಸೆರೆ


ಮಂಗಳೂರು, ಮೇ ೨೭- ಕೇರಳ ಹಾಗೂ ಕರ್ನಾಟಕ ವಿವಿಧ ಕಡೆ ಪೂರೈಸಲು ಮೀನು ಸಾಗಾಟ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಸುಮಾರು ೨೦೦ ಕೆಜಿ ಗಾಂಜಾದೊಂದಿಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳನ್ನು ಕಾಸರಗೋಡಿನ ಮುಹಮ್ಮದ್ ಫಾರೂಕ್ (೨೪), ಕುಶಾಲನಗರದ ಸಯ್ಯದ್ ಮುಹಮ್ಮದ್ (೩೧), ಬಂಟ್ವಾಳದ ಮುಡಿಪುವಿನ ಮುಹಮ್ಮದ್ ಅನ್ಸಾರ್ (೨೩), ಮಂಜೇಶ್ವರದ ಮೊಯ್ದಿನ್ ನವಾಝ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ೨ ವಾಹನ, ೩ ತಲವಾರು, ೧ ಚಾಕು, ೪ ಮೊಬೈಲ್, ೧ ವೈಫೈ ಸೆಟ್‌ಗಳನ್ನು ಸ್ವಾಧೀನಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಮೂಡಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದ ವೇಳೆ ಆರೋಪಿಗಳು ಸಾಕಷ್ಟು ಮಂದಿ ಕೇರಳದ ಕಾಸರಗೋಡು ಹಾಗೂ ಮಂಜೇಶ್ವರದವರೆಂದು ತನಿಖೆಯಿಂದ ತಿಳಿದು ಬಂದಿತ್ತು. ತನಿಖೆ ನಡೆಸುತ್ತಿದ್ದ ಮೂಡಬಿದ್ರೆ ಠಾಣಾ ಪಿಎಸ್‌ಐ ಸುದೀಮ್ ಮತ್ತು ಸಿಬ್ಬಂದಿಗೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನ ಗ್ರಾಮವೊಂದರಿಂದ ಮಂಗಳೂರು ಹಾಗೂ ಕಾಸರಗೋಡು ಭಾಗಕ್ಕೆ ಗಾಂಜಾ ಸರಬರಾಜು ಮಾಹಿತಿ ದೊರಕಿತ್ತು. ಅದರಂತೆ ಮಾಹಿತಿಯನ್ನು ಕಲೆ ಹಾಕುತ್ತಿದ್ದ ತಂಡಕ್ಕೆ ಈ ಗಾಂಜಾವನ್ನು ಹಾಸನ ಭಾಗದಿಂದ ಮಂಗಳೂರಿಗೆ ತರಲಾಗುತ್ತಿದೆ ಎಂಬ ಮಾಹಿತಿಯೂ ದೊರಕಿತ್ತು. ಇದರಂತೆ ಪ್ರಕರಣದ ಬೆನ್ನು ಹತ್ತಿದ್ದ ಮೂಡಬಿದ್ರೆ ಠಾಣಾ ಪೊಲೀಸರಿಗೆ ನಗರದ ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಕೆಸಿರೋಡ್ ಸಮೀಪದ ಒಲವಿನಹಳ್ಳಿ ಕ್ರಾಸ್ ಬಳಿ ತಪಾಸಣೆಯ ಸಂದರ್ಭ ಮೀನು ಸಾಗಾಟದ ಲಾರಿ ಹಾಗೂ ಕಾರೊಂದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಎಸಿಪಿ ರಂಜಿತ್ ಹಾಗೂ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಹನ ಪರಿಶೀಲಿಸಿದಾಗ ೨೦೦ ಕೆಜಿಯಷ್ಟು ಗಾಂಜಾ ಪತ್ತೆಯಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು. ಬಂಧಿತರಲ್ಲಿ ಮುಹಮ್ಮದ್ ಫಾರೂಕ್, ಮುಹಮ್ಮದ್ ಅನ್ಸಾರ್, ಮೊಯ್ದೀನ್ ನವಾಜ್ ಮೇಲೆ ಈ ಹಿಂದೆ ಗಾಂಜಾ ಮಾರಾಟ, ಸಾಗಾಟದ ಪ್ರಕರಣಗಳು ದಾಖಲಾಗಿವೆ. ೨೦೧೨ರಿಂದ ಈ ಆರೋಪಿಗಳು ಈ ಗಾಂಜಾ ಪ್ರಕರಣಗಳಲ್ಲಿ ಸಕ್ರಿಯವಾಗಿರುವುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ. ವ್ಯವಸ್ಥಿತವಾಗಿ ಗಾಂಜಾ ಸಾಗಾಟ, ಮಾರಾಟದ ಜಾಲ ಇದಾಗಿದ್ದು, ಇನ್ನಷ್ಟು ಆರೋಪಿಗಳು ಈ ಜಾಲದಲ್ಲಿರುವುದು ತಿಳಿದುಬಂದಿದೆ. ಮಂಗಳೂರು, ಕೊಡಗು, ಹಾಸನ, ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿ ಈ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಇವರ ಕಾರ್ಯಾಚರಣೆಯ ಕೇಂದ್ರ ಸ್ಥಾನ ಕಾಸರಗೋಡು ಆಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದರು. ಮೂಡಬಿದ್ರೆ ಪಿಎಸ್‌ಐ ಸುದೀಮ್ ಹಾಗೂ ತಂಡದ ಕಾರ್ಯ ಶ್ಲಾಘನೀಯವಾಗಿದ್ದು, ತಂಡಕ್ಕೆ ೨೫೦೦೦ ರೂ. ನಗದು ಬಹುಮಾನ ನೀಡಲಾಗುವುದು. ಮೂಡಬಿದ್ರೆ ದರೋಡೆ ಪ್ರಕರಣದಲ್ಲಿ ಈ ತಂಡದ ಪಾತ್ರದ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಂಜಾ ಖರೀದಿಸಿದಲ್ಲಿಂದಲೇ ತಲವಾರು ತಂದಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಖರೀದಿಸಿ ತಂದಿದ್ದರೇ ಅಥವಾ ತಮ್ಮ ರಕ್ಷಣೆಗಾಗಿ ಇರಿಸಿಕೊಂಡಿದ್ದರೇ ಎಂಬುದನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಉಪಸ್ಥಿತರಿದ್ದರು.