೨೦೦೦ ನೋಟು ವಾಪಸ್ ಆರ್ಥಿಕತೆ ಮೇಲೆ ಪರಿಣಾಮ ಇಲ್ಲ

ನವದೆಹಲಿ, ಜೂ. ೨೬- ದೇಶದಲ್ಲಿ ೨ ಸಾವಿರ ರೂ. ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿರುವುದು ದೇಶದ ಆರ್ಥಿಕತೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಗೌರ್ನರ್ ಶಕ್ತಿಕಾಂತದಾಸ್ ಹೇಳಿದ್ದಾರೆ.
ಕಳೆದ ಮೇ ೧೯ ರಂದು ರಿಸರ್ವ್ ಬ್ಯಾಂಕ್ ೨ ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನ ಮಾಡಿತ್ತು. ಈ ನೋಟುಗಳನ್ನು ಜನ ಸೆಪ್ಟೆಂಬರ್ ೩ ರವರೆಗೂ ಬ್ಯಾಂಕ್‌ಗಳಲ್ಲಿ ಬದಲಿಸಲು, ಠೇವಣಿ ಮಾಡಲು ಅವಕಾಶವನ್ನು ಕಲ್ಪಿಸಿತ್ತು. ಇದರಿಂದ ದೇಶದ ಆರ್ಥಿಕತ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದು ಎಂಬ ವರದಿಗಳು ಸುಳ್ಳಾಗಿದ್ದು, ೨ ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಆರ್ಥಿಕತೆ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಿಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಶಕ್ತಿಕಾಂತ್ ದಾಸ್ ಆಂಗ್ಲ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತದ ಆರ್ಥಿಕತೆ ಅನಿಶ್ಚಿತತೆಯ ಸವಾಲುಗಳನ್ನು ಎದುರಿಸುತ್ತಿದೆ. ನಮ್ಮ ಮುಂದೆ ೨-೩ ಸವಾಲುಗಳಿವೆ. ಮೊದಲನೆಯದು ಅಂತಾರಾಷ್ಟ್ರೀಯ ಅನಿಶ್ಚಿತತೆ, ಎರಡನೆಯದು ಎಲ್‌ನಿನೋ ಚಂಡಮಾರುತದ ಮುನ್ಸೂಚನೆ ಮತ್ತು ಇತರ ಮುಖ್ಯವಾಗಿ ಹವಮಾನ ಸಂಬಂಧಿತ ಅನಿಶ್ಚಿತತೆಯ ಸವಾಲುಗಳು ದೇಶದ ಆರ್ಥಿಕ ಪರಿಸ್ಥಿತಿಯ ಮುಂದಿವೆ ಎಂದು ಅವರು ಹೇಳಿದರು.ಹಣ ದುಬ್ಬರವನ್ನು ಶೇ. ೪ಕ್ಕೆ ಇಳಿಸಲು ಶ್ರಮಿಸುತ್ತಿದ್ದೇವೆ. ಆಹಾರ, ಹಣ ದುಬ್ಬರಕ್ಕೆ ಎಲ್ ನಿನೋ ಮುನ್ಸೂಚನೆ ಸವಾಲಾಗಿದೆ ಎಂದು ಅವರು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ ೨ ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಮಿನಿ ನೋಟ್ ಅಮಾನೀಕರಣ ಎಂದು ವಿಶ್ಲೇಷಿಸಲಾಗಿತ್ತು. ಇದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮಗಳಾಗಬಹುದು ಎಂದು ಹೇಳಲಾಗಿತ್ತು. ಆದರೆ ರಿಸರ್ವ್ ಬ್ಯಾಂಕ್‌ನ ಗೌರ್ನರ್ ರವರು ೨ ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನದಿಂದ ಆರ್ಥಿಕತೆ ಮೇಲೆ ಪರಿಣಾಮ ಆಗಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ೨೦೧೬ ನವೆಂಬರ್ ೮ ರಂದು ನೋಟುಗಳ ಅಮಾನೀಕರಣ ಮಾಡಿದ ನಂತರ ಹೊಸದಾಗಿ ೨ ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು. ಈಗ ೨ ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನವನ್ನು ರಿಸರ್ವ್ ಬ್ಯಾಂಕ್ ಮಾಡಿದ್ದು, ಸೆ. ೩೦ ರವರೆಗೂ ಈ ನೋಟುಗಳು ಚಲಾವಣೆಯಲ್ಲಿರುತ್ತವೆ. ಜನರು ಬ್ಯಾಂಕ್‌ಗಳಲ್ಲಿ ೨ ಸಾವಿರ ಮುಖ ಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.