
ನವದೆಹಲಿ,ಮೇ.೨೩- ಪೆಟ್ರೋಲ್ ಹಾಕಿಸಿಕೊಂಡ ಬಳಿಕ ವ್ಯಕ್ತಿಯೊಬ್ಬ ೨ ಸಾವಿರ ರೂ ನೋಟು ನೀಡಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಬೈಕ್‌ನಲ್ಲಿದ್ದ ಪೆಟ್ರೋಲ್ ವಾಪಾಸ್ ಪಡೆದ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ.
ಆರ್‌ಬಿಐ ೨ ಸಾವಿರ ನೋಟುಗಳ ಬ್ಯಾನ್ ಮಾಡಿದ್ದು, ಬ್ಯಾಂಕ್‌ನಲ್ಲಿ ನೋಟು ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಹಲವರು ೨,೦೦೦ ಮುಖಬೆಲೆಯ ನೋಟುಗಳನ್ನು ಪೆಟ್ರೋಲ್ ಬಂಕ್ ಗಳಲ್ಲಿ ನೀಡುತ್ತಿದ್ದು, ಇದು ಮಾಲೀಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹೀಗಾಗಿ ಇಂದು ಪೆಟ್ರೋಲ್ ಹಾಕಿಸಿಕೊಂಡು ೨ ಸಾವಿರ ನೋಟು ನೀಡಿದ್ದಕ್ಕೆ ಸಿಬ್ಬಂದಿ ಬೈಕ್‌ನಲ್ಲಿದ್ದ ಪೆಟ್ರೋಲ್ ವಾಪಾಸ್ ಪಡೆದುಕೊಂಡಿದ್ದಾನೆ. ಸದ್ಯ ಸಿಬ್ಬಂದಿ ಪೆಟ್ರೋಲ್ ವಾಪಾಸ್ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇಂದಿನಿಂದ ನೋಟುಗಳನ್ನು ಹಿಂತೆಗೆದುಕೊಳ್ಳುವ ಕಾರ್ಯ ಪ್ರಾರಂಭವಾಗಿದ್ದು, ಯಾರೂ ನಕಲಿ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡದಂತೆ ಬ್ಯಾಂಕುಗಳು ಸಿದ್ಧತೆಗಳನ್ನು ಮಾಡಿವೆ. ಇದಕ್ಕಾಗಿ, ನೋಟುಗಳನ್ನು ಪರಿಶೀಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದೆ. ಯಾವುದೇ ನಕಲಿ ನೋಟು ಬ್ಯಾಂಕಿನಲ್ಲಿ ಸಿಕ್ಕಿಬಿದ್ದರೆ, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಅಂತಹ ನಕಲಿ ಕರೆನ್ಸಿಗೆ ಬದಲಾಗಿ ಯಾವುದೇ ನೋಟುಗಳನ್ನು ಹಿಂದಿರುಗಿಸಲಾಗುವುದಿಲ್ಲ. ಅಲ್ಲದೆ, ಒಬ್ಬ ವ್ಯಕ್ತಿಯಿಂದ ಐದಕ್ಕಿಂತ ಹೆಚ್ಚು ನಕಲಿ ನೋಟುಗಳು ಕಂಡುಬಂದರೆ, ಈ ಸಂಬಂಧ ಎಫ್‌ಐಆರ್ ಸಹ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.