
ಜಾತ್ಯಾತೀತ ದೇಶದಲ್ಲಿ ಬಿಜೆಪಿ ಧರ್ಮದ ಮೇಲೆ ರಾಜಕೀಯ ಸಲ್ಲದು
ರಾಯಚೂರು,ಮಾ.೨೬: ಜಾತಿ, ಧರ್ಮದಿಂದಾಚಗೆ ನಾವೆಲ್ಲರು ಭಾರತೀಯರಾಗಿ ಸೌಹಾರ್ಧತೆಯಿಂದ ಬಾಳುತ್ತಿದ್ದೇವೆ. ಆದರೇ ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದೆ. ಸಂವಿಧಾನದಡಿಯಲ್ಲಿ ನೀಡಿದ ಮೀಸಲಾತಿ ತೆಗೆಯುವ ಮೂಲಕ ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡ ರವಿಬೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ ೪ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವುದು ಅಮಾನವಿಯ, ಇದು ಬಿಜೆಪಿ ಸರ್ಕಾರದ ಅಸಂವಿಧಾನಿಕ ನಡೆ, ಶೀಘ್ರ ಮೀಸಲಾತಿ ಕಡಿತವನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.
ರಾಜಕೀಯಕ್ಕಾಗಿ ಧರ್ಮಗಳ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ ಎಂದು ಆರೋಪಿಸಿದ್ದಾರೆ.
ಜಾತ್ಯತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡನೀಯ. ಎಲ್ಲ ಸಮುದಾಯದ ಹಿತ ಕಾಯುವ ಮುಖ್ಯಮಂತ್ರಿ ಎನ್ನುವ ಅಭಿಪ್ರಾಯಕ್ಕೆ ಬಸವರಾಜ ಬೊಮ್ಮಾಯಿ ತಿಲಾಂಜಲಿ ಇಟ್ಟಿದ್ದಾರೆ. ಬಿಜೆಪಿಯ ಕೋಮುದ್ವೇಷ ಈ ತೀರ್ಮಾನದಲ್ಲಿ ಎದ್ದು ಕಾಣುತ್ತದೆ’ ಎಂದು ತಿಳಿಸಿದ್ದಾರೆ.
‘ಕೂಡಲೇ ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರ ಕೈಬಿಡಬೇಕು. ಮತಬ್ಯಾಂಕ್ ಗಾಗಿ ಓಲೈಕೆ ರಾಜಕಾರಣ ಮಾಡಬಾರದು. ಮುಸ್ಲಿಮರ ೨ಬಿ ಮೀಸಲಾತಿ ಯಥಾವತ್ತಾಗಿ ಮುಂದುವರಿಸಬೇಕು’ ಎಂದು ರವಿ ಬೋಸರಾಜು ಒತ್ತಾಯಿಸಿದ್ದಾರೆ.