೨ನೇ ಹಂತ, ಮತದಾನ ಶಾಂತಿಯುತ

ಗಣ್ಯರಿಂದ ಮತ ಚಲಾವಣೆ

ಹುಬ್ಬಳ್ಳಿಯ ಮತಗಟ್ಟೆಯ ಬಳಿ ತಮ್ಮ ಹಕ್ಕು ಚಲಾಯಿಸಲು ಮತದಾರರು ಸರದಿ ಸಾಲಿನಲ್ಲಿ ನಿಂತಿರುವುದು.

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೭:ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದಿರುವ ೨ನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಮಧ್ಯಾಹ್ನದವರೆಗೆ ಒಟ್ಟಾರೆ ಶೇ. ೪೦ ರಿಂದ ೪೫ರಷ್ಟು ಮತದಾನವಾಗಿದೆ.ಕೆಲವೆಡೆ ಮತಯಂತ್ರ ದೋಷದಿಂದ ಮತದಾನ ವಿಳಂಬವಾಗಿದ್ದನ್ನು ಹೊರತುಪಡಿಸಿದರೆ, ಉಳಿದಂತೆ ಮತದಾನ ಎಲ್ಲೆಡೆ ಸುಗಮವಾಗಿ ಸಾಗಿದೆ. ೨ನೇ ಹಂತದ ಮತದಾನ ನಡೆದಿರುವ ೧೪ ಕ್ಷೇತ್ರಗಳಲ್ಲಿ ೨೨೭ ಅಭ್ಯರ್ಥಿಗಳ ರಾಜಕೀಯ ಭವಷ್ಯವನ್ನು ಮತದಾರ ಇವಿಎಂನ ಬಟನ್ ಒತ್ತುವ ಮೂಲಕ ನಿರ್ಧಾರ ಮಾಡಿದ್ದು,ಮತದಾರರ ತೀರ್ಪು ಏನೆಂಬುದು ಮತ ಎಣಿಕೆ ನಡೆಯುವ ಜೂ. ೪ ರಂದು ಬಹಿರಂಗವಾಗಲಿದೆ.೧೪ ಲೋಕಸಭಾ ಕ್ಷೇತ್ರಗಳ ಮತದಾನ ಎಲ್ಲೆಡೆ ಶಾಂತಿಯುತವಾಗಿ ನಡೆದಿದ್ದು, ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.ಇಂದು ನಡೆದಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್‌ಶೆಟ್ಟರ್,ಬಸವರಾಜ ಬೊಮ್ಮಾಯಿ ಇವರುಗಳು ಮತ ಚಲಾಯಿಸಿದ್ದು, ಹಾಗೆಯೇ ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ, ಭಗವಂತಕೂಬಾ ಸೇರಿದಂತೆ ಹಲವು ಗಣ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇಂದು ರಾಜ್ಯದ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ ಈ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು,ಮತದಾರರು ಉತ್ಸಾಹದಿಂದಲೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಬಿರು ಬಿಸಿಲಿನ ಕಾರಣ ಹಲವೆಡೆ ಮತದಾರರಿಗೆ ತಂಪು ಪಾನೀಯ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಪೆಂಡಾಲ್ ಹಾಕಿ ಬಿಸಿಲಿನ ಝಳದಿಂದ ಜನರನ್ನು ರಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿಯ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದವರಿಗೆ ತಂಪು ಪಾನೀಯ ನೀಡಲಾಗಿದೆ.
ಮತಯಂತ್ರ ದೋಷ
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ೪ ಮತಗಟ್ಟೆಗಳಲ್ಲಿ ಮತಯಂತ್ರದ ದೋಷ ಕಂಡು ಬಂದಿದ್ದು, ಮತಯಂತ್ರವನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಇದರಿಂದ ಮತದಾನ ತಡವಾಗಿ ಆರಂಭಗೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೊಸನಗರ ತಾಲ್ಲೂಕಿನ ಸುಳುಗೋಡು ಗ್ರಾಮದ ಮತಗಟ್ಟೆಯಲ್ಲೂ ಮತಯಂತ್ರ ದೋಷದಿಂದ ಮತದಾನ ೧ ಗಂಟೆ ವಿಳಂಬವಾಗಿ ಆರಂಭವಾಗಿದೆ ಬೀದರ್ ನಗರದ ನ್ಯಾಷನಲ್ ಕಾಲೇಜಿನ ಮತಗಟ್ಟೆಯಲ್ಲಿ ಮತಯಂತ್ರದ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ತಡವಾಗಿದ್ದು, ಮತದಾರರು ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.
ರಾಯಚೂರಿನ ಸಿಂಧನೂರು ತಾಲ್ಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ದೋಷದಿಂದ ಮತದಾನ ಅರ್ಧ ಗಂಟೆ ವಿಳಂಬವಾಯಿತು.
ಶತಾಯುಷಿಗಳ ಮತದಾನ
ಇಂದಿನ ಮತದಾನದಲ್ಲಿ ಮತದಾರರು ಉತ್ಸಾಹದಿಂದಲೇ ಮತ ಹಾಕುತ್ತಿದ್ದು, ಬಾಗಲಕೋಟೆ ಮತ್ತು ಬೀದರ್‌ನಲ್ಲಿ ಶತಾಯುಷಿಗಳು ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಬಾಗಲಕೋಟೆಯ ಬೀಳಗಿ ಪಟ್ಟಣದ ೧೦೪ ವರ್ಷದ ಸಿದ್ದವ್ವ ಸಿದ್ದಪ್ಪ ಜಗ್ಗಲ ಇವರು ಸಖಿ ಬೂತ್‌ನಲ್ಲಿ ಮತದಾನ ಮಾಡಿದರು. ಹಾಗೆಯೇ, ಬೀದರ್ ನಗರದ ೧೦೦ ವರ್ಷದ ಸುಭದ್ರಾಬಾಯಿ ಸಹ ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತ ಹಾಕಿ ಮತದಾನದ ಖುಷಿ ಹಂಚಿಕೊಂಡರು.
ಗದಗ ತಾಲ್ಲೂಕಿನ ಶಿರುಂಜಾ ಗ್ರಾಮದ ಶತಾಯುಷಿ ವೀರಮ್ಮ ಗುಡ್ಡದ ಇವರು ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ಮತ ಹಾಕಿದರು.

ಮತದಾನ ಬಹಿಷ್ಕಾರ
ಕೊಪ್ಪಳದ ಕುಕನೂರು ಪಟ್ಟಣದ ೧೯ನೇ ವಾರ್ಡಿನ ಮತದಾರರು ಮತದಾನ ಬಹಿಷ್ಕರಿಸಿದ್ದು, ಪಟ್ಟಣದ ಗುದ್ನೆಪ್ಪನ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಮತದಾನವನ್ನು ಬಹಿಷ್ಕಾರಿಸಿದ್ದಾರೆ.
ಕೊಪ್ಪಳ ಕ್ಷೇತ್ರದ ಕುಷ್ಠಗಿ ತಾಲ್ಲೂಕಿನ ತಾವರಗೇರ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನಬಹಿಷ್ಕಾರಮಾಡಿದ್ದು, ವಾರದ ಹಿಂದೆ ಇದೇ ಬಡವಾಣೆಯ ನಿವಾಸಿ ಲಕ್ಷ್ಮಿ ಎಂಬುವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದು, ನವಜಾತ ಶಿಶುಕೂಡ ಮೃತಪಟ್ಟಿತ್ತು. ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ. ದಾವಣಗೆರೆ ಲೋಕಸಭಾಕ್ಷೇತ್ರದ ಲೋಕಿ ಕೆರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಯಲ್ಲಮ್ಮ ನಗರದ ಮತದಾರರು ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿಲ್ಲ ಎಂದು ಮತದಾನ ಬಹಿಷ್ಕರಿಸಿದ್ದಾರೆ.

ಗಣ್ಯರ ಮತದಾನ
ಇಂದು ನಡೆದಿರುವ ೨ನೇ ಹಂತದ ಚುನಾವಣೆಯಲ್ಲಿ ಹಲವು ಗಣ್ಯರು, ಧಾರ್ಮಿಕ ನಾಯಕರು, ರಾಜಕೀಯ ನೇತಾರರು ಮತ ಚಲಾಯಿಸಿದ್ದು, ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ, ತೋಂಟದಾರ್ಯ ಮಠದ ಸ್ವಾಮೀಜಿ, ಪಂಚಮಸಾಲಿ ಪೀಠದ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಮಠಗಳ ಸ್ವಾಮೀಜಿಗಳು ತಮ್ಮ ಹಕ್ಕು ಚಲಾಯಿಸಿದರು.
ರಾಜ್ಯದ ಮಾಜಿ ಸಚಿವ ಶತಾಯುಷಿ ಡಾ.ಭೀಮಣ್ಣಖಂಡ್ರೆ ಅವರು ತಮ್ಮ ಪುತ್ರ ಸಚಿವ ಈಶ್ವರಖಂಡ್ರೆ ಹಾಗೂ ಮೊಮ್ಮಗ ಬೀದರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್‌ಖಂಡ್ರೆ ಜತೆ ಮತ ಚಲಾಯಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿಕಾರಿಪುರದ ಮತಗಟ್ಟೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕುಟುಂಬ ಸಮೇತರಾಗಿ ಆಗಮಿಸಿ ಮತ ಹಾಕಿದರು.
ಮತದಾನಕ್ಕೂ ಮುನ್ನ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ತಮ್ಮ ಪುತ್ರ ಬಿವೈ ರಾಘವೇಂದ್ರರ ವಿಜಯೇಂದ್ರರ ಜತೆ ವಿಶೇಷ ಪೂಜೆ ಸಲ್ಲಿಸಿ ನಂತರ ರಾಘವೇಂದ್ರ ಸ್ವಾಮಿ ಮಠಕ್ಕೂ ತೆರಳಿ ರಾಯರ ದರ್ಶನ ಪಡೆದು ಬಳಿಕ ಮತಗಟ್ಟೆಗೆ ಬಂದು ಮತ ಹಾಕಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಅವರ ಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಇವರುಗಳು ಸಹ ಮತ ಹಾಕಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಟುಂಬ ಸಮೇತರಾಗಿ ಕಲಬುರಗಿಯ ಬಸವನಗರದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿದರು. ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಶಿಗ್ಗಾವಿಯ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಸಹ ಬೆಳಗಾವಿಯಲ್ಲಿ ಮತದಾನ ಮಾಡಿದರು. ಮೊದಲು ತಮ್ಮ ತವರು ಕ್ಷೇತ್ರ ಹುಬ್ಬಳ್ಳಿಯಲ್ಲಿ ಮತ ಚಲಾಯಿಸುತ್ತಿದ್ದ ಅವರು,ಬೆಳಗಾವಿ ಅಭ್ಯರ್ಥಿಯದ ಬಳಿಕ ತಮ್ಮ ಮತವನ್ನು ಅಲ್ಲಿಗೆ ವರ್ಗಾಯಿಸಿಕೊಂಡಿದ್ದಾರೆ. ಸೊಸೆ ಶ್ರದ್ಧಾಶೆಟ್ಟರ್, ಹಾಲಿ ಸಂಸದೆ ಮಂಗಳಾ ಅಂಗಡಿ ಜತೆ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ಮತ ಹಾಕಿದರು. ಮಾಜಿ ಸಚಿವ ಹಾಗೂ ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ತಮ್ಮ ಕುಟುಂಬಸ್ಥರ ಜತೆ ಶಿವಮೊಗ್ಗ ನಗರದ ವಿಜ್ಞಾನ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್‌ಜೋಷಿ ಅವರು ತಮ್ಮ ಕುಟುಂಬಸ್ಥರ ಜತೆ ಹುಬ್ಬಳ್ಳಿ ನಗರದ ಭವಾನಿ ನಗರದ ಮತಗಟ್ಟೆಯಲ್ಲಿ ಮತ ಹಾಕಿದರು. ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ತಮ್ಮ ಪುತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಜತೆ ಬೆಳಗಾವಿಯಲ್ಲಿ ಮತ ಚಲಾಯಿಸಿದರು. ಸಚಿವರ ಸತೀಶ್‌ಜಾರಕಿಹೊಳಿ ತಮ್ಮ ಪುತ್ರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಜತೆ ಮತ ಹಾಕಿದರು.
ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಆಗಮಿಸಿ ಹುಬ್ಬಳ್ಳಿಯ ಮತಗಟ್ಟೆಯಲ್ಲಿ ಮತ ಹಾಕಿದರು.
ಹರಿಹರದ ಅಣಗವಾಡಿ ಗ್ರಾಮದಲ್ಲಿ ಪಂಚಮಸಾಲಿ ಪೀಠದ ಜಗದ್ಗರು ವಚನಾನಂದ ಸ್ವಾಮೀಜಿ ಮತ ಹಾಕಿದರು.ಕಲಬುರಗಿಯಲ್ಲಿ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್‌ಜಾಧವ್ ತಮ್ಮ ಹಕ್ಕು ಚಲಾಯಿಸಿದರು.
ಸಚಿವ ಶಿವಾನಂದ ಪಾಟೀಲ್ ಅವರು ವಿಜಯಪುರ ಲೋಕಸಭಾ ಕ್ಷೇತ್ರದ ಸರ್ಕಾರಿ ಮರಾಠಿ ಬಾಲಕರ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿದರು ಹಾಗೂ ಅವರ ಪುತ್ರಿ ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಸಹ ಮತ ಹಾಕಿದರು. ಸಚಿವ ಎಂ.ಬಿ ಪಾಟೀಲ್, ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಬಿಜಾಪುರದಲ್ಲಿ ಮತಚಲಾಯಿಸಿದರು.
ಬೀದರ್‌ನ ಬಸವಕಲ್ಯಾಣದಲ್ಲಿ ಕೇಂದ್ರ ಸಚಿವ ಭಗವಂತ ಕೂಬಾ ಮತ ಹಾಕಿದರು.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಳೂಕಿನ ಕುಬಟೂರಿನಲ್ಲಿ ಸಚಿವ ಮಧುಬಂಗಾರಪ್ಪ ಮತ ಚಲಾಯಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ತಂಗಡಗಿ ಕಾರಟಗಿಯಲ್ಲಿ ಮತ ಹಾಕಿದರು.
ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್ ಅವರು ಕಲಘಟಗಿ ತಾಲ್ಲೂಕಿನ ಮಡಿಕಿಹೊನ್ನಹಳ್ಳಿಯ ಮತಗಟ್ಟೆಯಲ್ಲಿ ಮತ ಹಾಕಿದರು.

ಘಟಾನುಘಟಿಗಳ ಭವಿಷ್ಯ
ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಡೆದಿರುವ ೨ನೇ ಹಂತದ ಮತದಾನದಲ್ಲಿ ರಾಜ್ಯದ ಹಲವು ಸಚಿವರುಗಳು ಪುತ್ರ ಪುತ್ರಿ, ಪತ್ನಿ ಸೇರಿದಂತೆ ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯವನ್ನು ಇಂದು ಮತದಾರರು ನಿರ್ಧರಿಸಿದ್ದಾರೆ.
ಇಂದು ನಡೆದಿರುವ ೨ನೇ ಹಂತದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್‌ಶೆಟ್ಟರ್, ಕೆಂದ್ರ ಸಚಿವರಾದ ಪ್ರಲ್ಹಾದ್‌ಜೋಷಿ, ಭಗವಂತಕೂಬಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಪುತ್ರ ಬಿವೈ ವಿಜಯೇಂದ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾಮಲ್ಲಿಕಾರ್ಜುನ್, ಸಚಿವರಾದ ಲಕ್ಷ್ಮಿಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ, ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್, ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣದೊಡ್ಡಮನಿ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ದಿ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್‌ಕುಮಾರ್ ಪತ್ನಿ ಗೀತಾಶಿವರಾಜ್‌ಕುಮಾರ್ ಸೇರಿದಂತೆ ೨೨೭ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಮುದ್ರೆ ಒತ್ತಿದ್ದಾನೆ.