೨ನೇ ಹಂತದ ರುಪೇ ಕಾರ್ಡ್‌ಗೆ ಮೋದಿ ಚಾಲನೆ

ನವದೆಹಲಿ, ನ.೨೦- ಭಾರತದ ವಿವಿಧ ಭಾಗಗಳಲ್ಲಿ ಭೂತಾನ್ ಪ್ರಜೆಗಳು ರುಪೇ ಕಾರ್ಡ್ ಬಳಸಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಕಲ್ಪಿಸಲು ರುಪೇ ಕಾರ್ಡ್ ಎರಡನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಚಾಲನೆ ನೀಡಿದ್ದಾರೆ.
ಭೂತಾನ್ ಪ್ರಧಾನಿ ಲೋಟೆ ಟೀಶೇರಿಂಗ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರುಪೇ ಕಾರ್ಡ್ ಗೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಆಗಸ್ಟ್ ನಲ್ಲಿ ಭೂತಾನ್ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರುಪೇ ಕಾರ್ಡ್ -೧ಯೋಜನೆಗೆ ಚಾಲನೆ ನೀಡಿದ್ದರು. ಇದು ಯಶಸ್ವಿಯಾದ ನಂತರ ಇದೀಗ ಎರಡನೇ ಹಂತಕ್ಕೆ ಚಾಲನೆ ನೀಡಲಾಗಿದೆ
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಭೂತಾನ್ ಜೊತೆಗೆ ಭಾರತ ನಿಲ್ಲುವ ಮೂಲಕ ತನ್ನ ಬದ್ಧತೆಯನ್ನು ಮಿತ್ರ ದೇಶಗಳಿಗಾಗಿ ಮತ್ತೊಮ್ಮೆ ಸಾಬೀತುಪಡಿಸಿದೆ. ಭವಿಷ್ಯದಲ್ಲಿ ಬೂತಾನ್ ಜೊತೆ ಭಾರತ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಬಿಎಸ್‌ಎನ್‌ಎಲ್ ಜೊತೆ ಒಪ್ಪಂದ ಮಾಡಿಕೊಂಡು ರುಪೇ ಕಾರ್ಡ್ ಎರಡನೇ ಹಂತವನ್ನು ಪ್ರಕಟಿಸಲಾಗಿದೆ ಭಾರತಕ್ಕೆ ಬಂದಾಗ ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಭೂತಾನ್ ನಲ್ಲಿ ಭಾರತದ ಎಟಿಎಂ ಗಳು ಕಾರ್ಯನಿರ್ವಹಿಸುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವನ್ನು ಹೊಂದಲಾಗಿದೆ ಇದರಿಂದಾಗಿ ಭಾರತ ಮತ್ತು ಭೂತಾನ್ ನಡುವೆ ಭವಿಷ್ಯದಲ್ಲಿ ಮತ್ತಷ್ಟು ಬಾಂಧವ್ಯ ಇದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ರುಪೇ ಕಾರ್ಡ್ ಭಾರತೀಯ ಡೆಬಿಟ್ ಕಾರ್ಡ್ ಆಗಿದ್ದು ಎಟಿಎಂ ಗಳು ಮತ್ತು ಪಿಒಎಸ್ ಮೂಲಕ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾರತ ಮತ್ತು ಭೂತಾನ್ ನಡುವಿನ ರೂಪಾಯಿ ಕಾರ್ಡ್ ಪರಿಚಯದಿಂದಾಗಿ ಎರಡು ದೇಶಗಳ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಗೌರವಭಾವ ದಿಂದ ಕಾಣಲು ನೆರವಾಗಲಿದೆ ಎಂದು ಹೇಳಿದೆ.
ಜೊತೆಗೆ ಭಾರತ ಮತ್ತು ಭೂತಾನ್ ಸಂಸ್ಕೃತಿ ಪರಂಪರೆ ಉಭಯ ದೇಶಗಳಲ್ಲಿ ಪರಿಚಯಿಸಲು ಕೂಡ ಸಹಕಾರಿಯಾಗಲಿದೆ ಎಂದು ತಿಳಿಸಿದೆ