೨ನೇ ಹಂತದ ಮತದಾನ ಪ.ಬಂಗಾಳದಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆ

ನವದೆಹಲಿ,ಏ.೧- ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಇಂದು ೨ನೇ ಹಂತದ ಮತದಾನ ಪ್ರಗತಿಯಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನವೆ ಹಿಂಸಾಚಾರ ಸಂಭವಿಸಿ ಟಿಎಂಸಿ ಕಾರ್ಯಕರ್ತನ ಹತ್ಯೆಯಾಗಿದೆ. ಇದರಿಂದಾಗಿ ಮತಗಟ್ಟೆ ಕೇಂದ್ರದ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇಂದು ಬೆಳಗಿನ ಜಾವ ಮೆದಿನಿ ಪುರ್ ಜಿಲ್ಲೆಯಲ್ಲಿ ಟಿಎಂಸಿ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ. ೧೦ ರಿಂದ ೧೫ ಮಂದಿ ಜನರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡು ಉತ್ತಮ್ ದೊಲೌಯಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ. ಇದರಿಂದಾಗಿ ಮತಗಟ್ಟೆ ಕೇಂದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು, ಮತದಾರರನ್ನು ಬೆದರಿಸಲು ಈ ಕೃತ್ಯ ಎಸಗಲಾಗಿದೆ ಎಂದು ಈ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ೭ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದೆಡೆ ಬಿಜೆಪಿ ನಾಯಕ ತನ್ಮಯ್ ಘೋಷ್ ಅವರ ಕಾರನ್ನು ಉದ್ರಿಕ್ತ ಗುಂಪು ಧ್ವಂಸಗೊಳಿಸಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಹಲವು ಮತಗಟ್ಟೆಗಳಲ್ಲಿ ಗಲಭೆ, ಅಹಿತಕರ ವಾತಾವರಣ ಮುಂದುವರಿದಿದೆ. ದೆಬ್ರಾ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಆರಂಭದ ವೇಳೆ ಗದ್ದಲ ಉಂಟಾಗಿದ್ದು, ಬಿಜೆಪಿಯ ಮಂಡಲ ಅಧ್ಯಕ್ಷ ಮೋಹನ್ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಮತಗಟ್ಟೆ ಬಳಿ ಭದ್ರತಾ ಪಡೆಗಳು ಇರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ರಾಜಕೀಯ ಪಕ್ಷಗಳು ಹೊರಗಿನಿಂದ ಗೂಂಡಾಗಳನ್ನು ಕರೆದುಕೊಂಡು ಬಂದು ಗಲಭೆ ಎಬ್ಬಿಸಿದ್ದಾರೆ. ಮತದಾರರು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ೨ನೇ ಹಂತದ ಮತದಾನದಲ್ಲಿ ೩೦ ಕ್ಷೇತ್ರಗಳಲ್ಲಿ ೧೭೧ ಅಭ್ಯರ್ಥಿಗಳು ಹಾಗೂ ಅಸ್ಸಾಂನಲ್ಲಿ ೩೪೫ ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದು ಇಡೀ ದೇಶದ ಗಮನಸೆಳೆದಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ವ್ಯಾಪ್ತಿಗೆ ಬರುವ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ಮತ್ತು ಕುಟುಂಬದ ಭದ್ರಕೋಟೆ ಎಂದು ಕರೆಯಲಾಗುತ್ತಿದೆ. ಚುನಾವಣಾ ಪ್ರಚಾರದ ವೇಳೆ ಮಮತಾ ಮತ್ತು ಸುವೇಂದು ನಡುವೆ ವಾಕ್ಸ್‌ಮರ ಜೋರಾಗಿ ನಡೆದಿತ್ತು. ಈಗ ಈ ಇಬ್ಬರು ನಾಯಕರ ಪೈಕಿ ಮತದಾರರು ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ೩೦ ಕ್ಷೇತ್ರಗಳಿಗೆ ಮತದಾನ ಬಿರುಸಿನಿಂದ ಸಾಗಿದೆ. ಅಲ್ಲಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಹೊರತಾಗಿಯೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದ ದೃಶ್ಯ ಕಂಡು ಬಂದಿತು. ಅದರಲ್ಲೂ ಇದೇ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಯುವ ಮತದಾರರು ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.ಮಧ್ಯಾಹ್ನದ ವೇಳೆಗೆ ಶೇ. ೪೨ ರಷ್ಟು ಮತದಾನವಾಗಿದೆ.
ಅಸ್ಸಾಂನ ವಿಧಾನಸಭೆಗೆ ೨ನೇ ಹಂತದಲ್ಲಿ ೩೯ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿದೆ. ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರಲ್ಲೂ ಸಂಭ್ರಮ ಮನೆ ಮಾಡಿತ್ತು. ಹೊತ್ತು ಕಳೆಯುತ್ತಿದ್ದಂತೆ ಮತದಾರರು ಮತಗಟ್ಟೆಯತ್ತ ಆಗಮಿಸಿ ಮತ ಚಲಾಯಿಸುವ ದೃಶ್ಯ ಕಂಡು ಬಂತು. ಮಧ್ಯಾಹ್ನದ ವೇಳೆಗೆ ಅಸ್ಸಾಂನಲ್ಲಿ ಶೇ. ೪೧ ರಷ್ಟು ಮತದಾನವಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವ್ಯಾಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಧಾನಿ ಮನವಿ
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ, ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ಹಬ್ಬದಲ್ಲಿ ಅರ್ಹ ಮತದಾರರು ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಪಶ್ಚಿಮ ಬಂಗಾಳದ ಜನತೆಗೆ ಮತ್ತೊಂದು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.