೨ನೇ ಹಂತದ ಚುನಾವಣೆ ಕೈ ಮಹತ್ವದ ಸಭೆ

ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಭಾರತ್ ಜೋಡೊ ಭವನದಲ್ಲಿ ಇಂದು ನಡೆದ ರಾಜ್ಯದ ೨ನೇ ಹಂತದ ಲೋಕಸಭೆ ಚುನಾವಣೆ ನಡೆಯುವ ಕ್ಷೇತ್ರ ಎಲ್ಲಾ ಮುಖಂಡರುಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಕೆ. ಪಾಟೀಲ್, ಡಾ. ಜಿ. ಪರಮೇಶ್ವರ್, ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಶಾಸಕ ಲಕ್ಷ್ಮಣ್ ಸವದಿ ಮತ್ತಿತರರು ಭಾಗವಹಿಸಿ ಚರ್ಚೆ ನಡೆಸಿದರು.

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೫:ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ೨ನೇ ಹಂತದ ಚುನಾವಣೆಗೆ ಸಂಬಂಧಿಸಿದಂತೆ ರಣತಂತ್ರಗಳನ್ನು ರೂಪಿಸಲು ಕಾಂಗ್ರೆಸ್ ಪಕ್ಷ ಮಹತ್ವದ ಸಭೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ೨ನೇ ಹಂತದ ಚುನಾವಣೆ ನಡೆಯುವ ಮುಖಂಡರು ಮತ್ತು ಪ್ರಭಾವಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಚುನಾವಣೆಯ ಸಿದ್ಧತೆ,ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆಗಳು ನಡೆದವು.
೨ನೇ ಹಂತದ ಚುನಾವಣೆ ನಡೆಯುವ ಬೆಳಗಾವಿ,ಚಿಕ್ಕೋಡಿ, ಬಾಗಲಕೋಟೆ,ಕಲಬುರಗಿ, ವಿಜಯಪುರ, ರಾಯಚೂರು, ಬೀದರ್, ಕೊಪ್ಪಳ,ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ,ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳ ಮುಖಂಡರು ಹಾಗೂ ಪ್ರಭಾವಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದು ಚುನಾವಣಾ ಗೆಲುವಿಗೆ ಏನೆಲ್ಲ ರಣತಂತ್ರಗಳನ್ನು ರೂಪಿಸಬೇಕು, ಯಾವ ರೀತಿ ಪ್ರಚಾರ ಕೈಗೊಳ್ಳಬೇಕು ಎಂಬ ಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗದರ್ಶನ ಮಾಡಿದರು.
ಯಾವ ಯಾವ ಕ್ಷೇತ್ರಗಳಲ್ಲಿ ಯಾವ ನಾಯಕರು ಪ್ರಚಾರ ನಡೆಸಬೇಕು,ಎಲ್ಲೆಲ್ಲಿ ಸಮಾವೇಶಗಳನ್ನು ನಡೆಸಬೇಕು ಎಂಬ ಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದವು.
ಈ ಸಭೆಯಲ್ಲಿ ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಹೆಚ್.ಕೆ ಪಾಟೀಲ್,ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್‌ಅಹ್ಮದ್‌ಖಾನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.