
ರಾಜೀವ್ ಗಾಂಧಿಯವರ ಪುಣ್ಯತಿಥಿ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು. ಸಚಿವ ಎಂ.ಬಿ ಪಾಟೀಲ್ ಇದ್ದಾರೆ.
ಬೆಂಗಳೂರು,ಮೇ೨೧:ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಳಂಬವಾಗಲಿದ್ದು, ೨ನೇ ಹಂತದ ಸಂಪುಟ ವಿಸ್ತರಣೆಯಾದ ನಂತರವೇ ಸಚಿವರುಗಳಿಗೆ ಖಾತೆ ಹಂಚಿಕೆ ಆಗಲಿದೆ. ೨ನೇ ಹಂತದ ಸಂಪುಟ ವಿಸ್ತರಣೆ ಈ ತಿಂಗಳ ೨೬ ಇಲ್ಲವೇ ೨೭ ರಂದು ಆಗುವ ಸಾಧ್ಯತೆ ಇದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರುಗಳು ಮೂರು ದಿನದ ವಿಧಾನಸಭಾ ಅಧಿವೇಶನ ಮುಗಿಸಿಕೊಂಡು ಮೇ ೨೪ರ ನಂತರ ದೆಹಲಿಗೆ ತೆರಳಿ ವರಿಷ್ಠರೊಡನೆ ಚರ್ಚಿಸಿ ೨ನೇ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವರು.
೨ನೇ ಹಂತದಲ್ಲಿ ಸುಮಾರು ೨೦ ಸಚಿವರ ಪ್ರಮಾಣವಚನ ನಡಯಲಿದೆ. ಇದಾದ ಬಳಿಕವೇ ಎಲ್ಲ ಸಚಿವರುಗಳಿಗೂ ಖಾತೆ ಹಂಚಿಕೆಯಾಗಲಿದೆ. ಅಲ್ಲಿಯವರೆಗೂ ನಿನ್ನೆ ಪ್ರಮಾಣವಚನ ಸ್ವೀಕರಿಸಿರುವ ಸಚಿವರುಗಳು ಖಾತೆರಹಿತವಾಗಿಯೇ ಮುಂದುವರೆಯಲಿದ್ದಾರೆ.ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯ, ಗೊಂದಲಗಳಿಗೆ ಅವಕಾಶವಾಗಬಾರದು ಎಂಬ ಕಾರಣಕ್ಕೆ ಈಗಿರುವ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುತ್ತಿಲ್ಲ. ೨ನೇ ಹಂತದ ಸಂಪುಟ ವಿಸ್ತರಣೆ ಬಳಿಕ ಎಲ್ಲ ಸಚಿವರುಗಳಿಗೆ ಒಟ್ಟಿಗೆ ಖಾತೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತ ಮೂಲಗಳು ಹೇಳಿವೆ.
ಸಂಪುಟ ವಿಸ್ತರಣೆ ೨೬ ಇಲ್ಲವೇ ೨೭
೨ನೇ ಹಂತದ ಸಂಪುಟ ವಿಸ್ತರಣೆ ಈ ತಿಂಗಳ ೨೬ ಇಲ್ಲವೇ ೨೭ ರಂದು ನಡೆಯುವ ಸಾಧ್ಯತೆಗಳಿವೆ. ೨೪ರ ಬಳಿಕ ದೆಹಲಿಗೆ ೨ನೇ ಹಂತದ ಸಂಪುಟ ವಿಸ್ತರಣೆ ಸಂಬಂಧ ತೀರ್ಮಾನ ಕೈಗೊಳ್ಳಲು ದೆಹಲಿಗೆ ಬರುವಂತೆ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರಿಗೆ ಹೇಳಿದ್ದು, ಅದರಂತೆ ಈ ಇಬ್ಬು ನಾಯಕರುಗಳು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ಸಚಿವರಾಗುವವರ ಪಟ್ಟಿಯನ್ನು ಆಖೈರುಗೊಳಿಸುವರು.
ಶಾಸಕರ ಹಿರಿತನ, ಪ್ರಾದೇಶಿಕವಾರು, ಜಾತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಸಚಿವರಾಗಲು ಕಾಂಗ್ರೆಸ್‌ನಲ್ಲಿ ಪೈಪೋಟಿಯೇ ಇದ್ದು, ೨ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ೨೦ ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಯಾರಿಗೆಲ್ಲ ಸಚಿವ ಪಟ್ಟ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರ ಜತೆಯೇ ೨೫ ಸಚಿವರು ನಿನ್ನೆಯೇ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಸಚಿವರ ಹೆಸರುಗಳನ್ನು ಅಂತಿಮಗೊಳಿಸಲು ಸಾಧ್ಯವಾಗದ ಕಾರಣ ೮ ಸಚಿವರಷ್ಟೇ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಯಿತು. ಉಳಿದವರನ್ನು ೨ನೇ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವರನ್ನಾಗಿಸುವ ತೀರ್ಮಾನವನ್ನು ಹೈಕಮಾಂಡ್ ಕೈಗೊಂಡಿದೆ. ಹಾಗಾಗಿ, ಆದಷ್ಟು ಶೀಘ್ರ ಅಂದರೆ ಈ ತಿಂಗಳ ೨೭ರೊಳಗೆ ೨ನೇ ಹಂತದ ಸಂಪುಟ ವಿಸ್ತರಣೆಯಾಗುವುದು ಬಹುತೇಕ ನಿಶ್ಚಿತ.