ಬೆಂಗಳೂರು, ಮಾ. ೨೭- ಮುಂಬರುವ ವಿಧಾನಸಭಾ ಚುನಾವಣೆಗೆ ೧೨೪ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ ೨ನೇ ಪಟ್ಟಿ ಬಿಡುಗಡೆಗೂ ಸಿದ್ದತೆ ನಡೆಸಿದ್ದು, ೨ನೇ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಇಂದು ಪಕ್ಷದ ಸ್ಕ್ರೀನಿಂಗ್ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆದಿದೆ.
ಎಐಸಿಸಿ ಮಟ್ಟದ ಅಭ್ಯರ್ಥಿಗಳ ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಾಕಿ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ನಡೆಯಲಿದ್ದು, ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಅಷ್ಟೇನು ಪೈಪೋಟಿ ಇರದ ಕ್ಷೇತ್ರಗಳಿಗೆ ಮೊದಲನೇ ಪಟ್ಟಿಯಲ್ಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆದರೆ ೨ನೇ ಪಟ್ಟಿ ಆಯ್ಕೆ ಅಷ್ಟೇನು ಸುಲಭವಲ್ಲ ಎಂದು ಹೇಳಲಾಗಿದ್ದು, ಬಾಕಿ ಇರುವ ಒಂದೊಂದು ಕ್ಷೇತ್ರಕ್ಕೂ ೨-೩ ಅಭ್ಯರ್ಥಿಗಳು ಪೈಪೋಟಿಯಲ್ಲಿದ್ದಾರೆ. ಜತೆಗೆ ಕೆಲ ಅಭ್ಯರ್ಥಿಗಳಿಗೆ ಪಕ್ಷದ ಘಟಾನುಘಟಿ ಮುಖಂಡರುಗಳ ಬೆಂಬಲವೂ ಇದ್ದು, ೨ನೇ ಪಟ್ಟಿ ಅಂತಿಮಗೊಳಿಸುವುದು ಕಾಂಗ್ರೆಸ್‌ಗೆ ಸವಾಲಾಗಿದೆ.
ಅಭ್ಯರ್ಥಿಗಳ ೨ನೇ ಪಟ್ಟಿ ಆಯ್ಕೆ ಸಂಬಂಧ ಸಭೆ ಸೇರಿರುವ ಸ್ಕ್ರೀನಿಂಗ್ ಕಮಿಟಿ ಎಲ್ಲವನ್ನು ಅಳೆದು ತೂಗಿ ಗೆಲ್ಲುವ ಮಾನದಂಡದ ಮೇಲೆ ೫೦ ರಿಂದ ೬೦ ಕ್ಷೇತ್ರಗಳಿಗೆ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಸಿದ್ದಗೊಳಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕಾಂಗ್ರೆಸ್‌ನ ೨ನೇ ಪಟ್ಟಿ ಬಹುತೇಕ ಇಂದೇ ಅಂತಿಮಗೊಳಿಸಿ ಹೈಕಮಾಂಡ್ ಅನುಮೋದನೆಗೆ ಕಳುಹಿಸಲಾಗುತ್ತದೆಯಾದರೂ ಬಿಜೆಪಿಯ ಮೊದಲನೇ ಪಟ್ಟಿ ಬಿಡುಗಡೆಯಾದ ನಂತರವೇ ಕಾಂಗ್ರೆಸ್‌ನ ೨ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಬಿಜೆಪಿ ಏಪ್ರಿಲ್ ಮೊದಲ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಇದಾದ ನಂತರ ಕಾಂಗ್ರೆಸ್ ಪಕ್ಷ ತನ್ನ ೨ನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸ್ಕ್ರೀನಿಂಗ್ ಕಮಿಟಿಯ ಎಲ್ಲ ಸದಸ್ಯರುಗಳು ಪಾಲ್ಗೊಂಡಿದ್ದರು.