೨ನೇ ಪಟ್ಟಿಯಲ್ಲೂ ಸಿಗದ ಟಿಕೆಟ್

ಬೆಂಗಳೂರು,ಏ.೬:ಕಾಂಗ್ರೆಸ್‌ನ ೨ನೇ ಪಟ್ಟಿಯಲ್ಲಿ ಹಾಲಿ ಶಾಸಕರಾದ ಪುಲಿಕೇಶಿ ನಗರದ ಅಖಂಡ ಶ್ರೀನಿವಾಸಮೂರ್ತಿ, ಕುಂಧಗೋಳದ ಕುಸುಮಾ ಶಿವಳ್ಳಿ ಮತ್ತು ಹರಿಹರದ ರಾಮಪ್ಪ ಇವರುಗಳಿಗೆ ಟಿಕೆಟ್ ಸಿಕ್ಕಿಲ್ಲ. ಈ ಕ್ಷೇತ್ರಗಳಲ್ಲಿ ಪೈಪೋಟಿ ಇರುವುದರಿಂದ ೨ನೇ ಪಟ್ಟಿಯಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
೨ನೇ ಪಟ್ಟಿಯಲ್ಲಿ ೧೧ ಮಂದಿ ಲಿಂಗಾಯತರು, ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ೧೧ ಮಂದಿ ಒಕ್ಕಲಿಗ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ. ಕುರುಬ ಮತ್ತು ಮುಸ್ಲಿಂ ಸಮುದಾಯದ ಮೂವರಿಗೆ ಟಿಕೆಟ್ ಸಿಕ್ಕಿದ್ದು, ಉಳಿದಂತೆ ಪರಿಶಿಷ್ಟ ಜಾತಿಯ ನಾಲ್ವರಿಗೆ ಟಿಕೆಟ್ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ ಎಡಗೈನ ಇಬ್ಬರು, ಬಲಗೈನ ಇಬ್ಬರಿಗೆ ಟಿಕೆಟ್ ನೀಡಿದ್ದು, ಪರಿಶಿಷ್ಟ ವರ್ಗದ ಇಬ್ಬರಿಗೆ ಟಿಕೆಟ್ ಸಿಕ್ಕಿದೆ.
ದತ್ತಾಗೆ ಟಿಕೆಟ್ ಇಲ್ಲ
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಕಡೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವೈ.ಎಸ್.ವಿ ದತ್ತಾ ಅವರಿಗೆ ಟಿಕೆಟ್ ನೀಡಿಲ್ಲ. ಇಲ್ಲಿ ಎಸ್.ಎನ್. ಆನಂದ್ ಎಂಬುವರಿಗೆ ಕೈ ಟಿಕೆಟ್ ನೀಡಲಾಗಿದೆ.
ಭಾರಿ ಕುತೂಹಲಕ್ಕೆ ಕಾರಣವಾಗಿರುವ ಕೋಲಾರ ಕ್ಷೇತ್ರದ ಟಿಕೆಟ್‌ನ್ನು ಪ್ರಕಟಿಸಿಲ್ಲ. ಚಿತ್ರದುರ್ಗ ಜಿಲ್ಲಾ ಕನ್ನಡ ಚಿತ್ರರಂಗದ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.