೨ನೇ ದಿನವೂ ಎಸ್‌ಐಟಿಯಿಂದ ಭವಾನಿ ವಿಚಾರಣೆ

ಬೆಂಗಳೂರು,ಜೂ.೮-ಸಂತ್ರಸ್ತ ಮಹಿಳೆಯ ಅಪಹರಣದ ಪ್ರಕರಣದ ಸಂಬಂಧ ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಅವರನ್ನು ಇಂದು ಮತ್ತೆ ವಿಶೇಷ ತನಿಖಾ ತಂಡ(ಎಸ್‌ಐಟಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಕೆ.ಆರ್.ನಗರ ಸಂತ್ರಸ್ತೆ ಅಪಹರಣ ಪ್ರಕರಣದ ವಿಚಾರಣೆಗಾಗಿ ಕೊನೆಗೂ ನಿನ್ನೆ ಹೈಕೋರ್ಟ್ ಆದೇಶದ ಮೇರೆಗೆ ಎಸ್‌ಐಟಿ ಕಚೇರಿಗೆ ಭವಾನಿ ರೇವಣ್ಣ ಹಾಜರಾಗಿದ್ದರು. ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್ ಒಂದು ವಾರದ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ಬೆನ್ನಲ್ಲೇ ಎಸ್‌ಐಟಿ ವಿಚಾರಣೆಗೆ ಭವಾನಿ ಹಾಜರಾಗಿದ್ದರು. ಸೂಕ್ತ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಇಂದು ಮತ್ತೆ ಭವಾನಿ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಆರೋಪ ನಿರಾಕರಣೆ:
ಸಿಐಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ವಕೀಲರ ಜತೆ ಭವಾನಿ ರೇವಣ್ಣ ಆಗಮಿಸಿದ್ದರು. ವಿಚಾರಣೆ ವೇಳೆ ಭವಾನಿ, ನಾನು ಮಹಿಳೆಯನ್ನು ಅಪಹರಣ ಮಾಡಿಸಿಲ್ಲ. ಎಲ್ಲವೂ ಷಡ್ಯಂತ್ರ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆದಿದ್ದರೂ ಹೆಚ್ಚಿನ ಮಾಹಿತಿ ಲಭಿಸದೇ ಇರುವುದರಿಂದ ಅದಿಕಾರಿಗಳು ಮತ್ತೆ ಭವಾನಿ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಭವಾನಿ ಹೇಳಿದ್ದೇನು:
ಸಂತ್ರಸ್ತೆ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರನ್ನು ಅಪಹರಣ ಮಾಡಿಸಿಲ್ಲ. ಆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರೋ ಸಂಚು ರೂಪಿಸಿದ್ದು, ಇದರ ಭಾಗವಾಗಿ ಈ ಆರೋಪ ಹೊರಿಸಲಾಗುತ್ತಿದೆ?? ಎಂದು ಭವಾನಿ ರೇವಣ್ಣ ಅದಿಕಾರಿಗಳ ಮುಂದೆ ಹೇಳಿದ್ದಾರೆ.
ಒಂದು ವಾರ ಮಧ್ಯಂತರ ಜಾಮೀನು ಕೆ.ಆರ್. ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ಬೇಕಾಗಿದ್ದು, ತನಿಖೆಗೆ ಸಹಕರಿಸಿದೆ ತಲೆ ಮರೆಸಿಕೊಂಡಿರುವ ಭವಾನಿ ಅವರಿಗೆ ಮುಂದಿನ ಶುಕ್ರವಾರದವರೆಗೆ ನಿರೀಕ್ಷಣಾ ಜಾಮೀನು ನೀಡಿ ಕೋರ್ಟ್ ಆದೇಶ ನೀಡಿತ್ತು.
ಮಧ್ಯಾಹ್ನ ೧ ಗಂಟೆಗೆ ಎಸ್‌ಐಟಿ ಮುಂದೆ ತನಿಖೆಗೆ ಹಾಜರಾಗಬೇಕು. ಒಂದು ಗಂಟೆಯಿಂದ ಐದು ಗಂಟೆಯವರೆಗೆ ತನಿಖೆ ನಡೆಸಬಹುದು. ಐದು ಗಂಟೆಯ ನಂತರ ಅವರನ್ನು ಎಸ್‌ಐಟಿ ಕಚೇರಿಯಲ್ಲಿ ಇಟ್ಟುಕೊಳ್ಳಬಾರದು ಎಂದು ಕೋರ್ಟ್ ಸೂಚನೆ ನೀಡಿತ್ತು.
೧೧ ಕಾರಣಗಳು:
ಭವಾನಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ೧೧ ಕಾರಣಗಳಿವೆ ಎಂದು ಭವಾನಿ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಈ ವಾದಗಳನ್ನು ಕೋರ್ಟ್ ಮಾನ್ಯ ಮಾಡಿತು. ಆದರೆ ಕಳೆದೆರಡು ಸಲದ ನೋಟೀಸ್‌ಗೆ ಭವಾನಿ ಹಾಜರಾಗದಿದ್ದುದಕ್ಕೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಸದ್ಯ ಆ ಆದೇಶವನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಶುಕ್ರವಾರದವರೆಗೂ ಮಧ್ಯಂತರ ಜಾಮೀನು ನೀಡಲಾಗಿದ್ದು, ಮುಂದಿನ ಶುಕ್ರವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಕೋರ್ಟ್ ಹೇಳಿದೆ. ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಬಂಧನ ವಾರೆಂಟ್:
ಪ್ರಕರಣಕ್ಕೆ ಸಂಬಂಧಿಸಿ ನಿಯಮದ ೪೧ಎ ಅಡಿ ಭವಾನಿ ರೇವಣ್ಣಗೆ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಆದರೆ, ತಾವು ಹೊಳೆನರಸೀಪುರದ ಮನೆಯಲ್ಲಿ ಸಿಗುವುದಾಗಿ ಭವಾನಿ ತಿಳಿಸಿದ್ದರು. ಇದಕ್ಕಾಗಿ ಎಸ್‌ಐಟಿ ಟೀಮ್ ಅಲ್ಲಿಗೆ ತೆರಳಿದಾಗ, ಭವಾನಿ ಅಲ್ಲಿರದೆ ಕಣ್ಮರೆಯಾಗಿದ್ದರು. ಹೀಗಾಗಿ ಭವಾನಿ ಬಂಧನಕ್ಕಾಗಿ ಬಂಧನ ವಾರೆಂಟ್ ಜಾರಿ ಮಾಡಲಾಗಿತ್ತು