೨ನೇ ಅಲೆ ತಡೆಯಲು ಮೋದಿ ವಿಫಲ: ವ್ಯಾಪಕ ಟೀಕೆ

ನವದೆಹಲಿ,ಮೇ ೧- ದೇಶದಲ್ಲಿ ಆರ್ಭಟಿಸುತ್ತಿರುವ ಕೊರೊನಾ ಸೋಂಕನ್ನು ಪ್ರಧಾನಿ ಮೋದಿ ಮನಸ್ಸು ಮಾಡಿದ್ದರೆ ನಿಯಂತ್ರಿಸಬಹುದಿತ್ತು. ಆದರೆ, ಅವರು ಆ ಕೆಲಸ ಮಾಡಲಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಾಕಾರರು ಹೇಳಿ ೨ನೇ ಅಲೆಯ ಮುನ್ಸೂಚನೆ ಇದ್ದರೂ ಪ್ರಧಾನಿ ಮೋದಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಅಲ್ಲಿ ಸೇರುತ್ತಿದ್ದ ಭಾರಿ ಜನಸ್ತೋಮದಿಂದ ಉತ್ಸಾಹಭರಿತರಾಗಿದ್ದರು. ಕೋವಿಡ್ ೨ನೇ ಅಲೆ ತಡೆಗೆ ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆ ವರದಿಯಲ್ಲಿ ಹೇಳಿದೆ.
ಕೇಂದ್ರ ಸರ್ಕಾರ ರಾಜಕೀಯ ಸಮಾವೇಶ, ಧಾರ್ಮಿಕ ಸಮಾವೇಶಗಳಿಗೆ ಅವಕಾಶ ಮಾಡಿಕೊಟ್ಟಿದ್ದೇ ದೇಶದಲ್ಲಿ ಕೊರೊನಾ ಇಷ್ಟೊಂದು ಪ್ರಮಾಣದಲ್ಲಿ ಆರ್ಭಟಿಸಲು ಕಾರಣ ಎಂದು ಟೀಕಾಕಾರರು ಹೇಳುತ್ತಿದ್ದರೆ, ಮೋದಿಯಿಂದ ಪ್ರಭಾವಿತರಾಗಿರುವವರ ವಾದವೇ ಬೇರೆಯಾಗಿದ್ದು,ಕೊರೊನಾ ನಿಯಂತ್ರಣ ವೈಫಲ್ಯಕ್ಕೆ ಮೋದಿ ಕಾರಣವಲ್ಲ. ರಾಜ್ಯಸರ್ಕಾರಗಳು ಹೊಣೆ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಈ ವರದಿಗಳು ಹೇಳಿದೆ.
ರಾಜ್ಯಸರ್ಕಾರಗಳು ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ನಂತಹ ಬಿಗಿಕ್ರಮಗಳನ್ನು ಕೈಗೊಳ್ಳಬೇಕಿತ್ತು. ಎಲ್ಲದಕ್ಕೂ ಕೇಂದ್ರದ ಮೇಲೆ ಅವಲಂಬಿತವಾಗಿದ್ದು ಸರಿಯಲ್ಲ. ಸ್ಥಳೀಯವಾಗಿಯೇ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಮೋದಿ ಪರ ಇರುವವರ ವಾದವಾಗಿದೆ. ಆದರೆ, ಮೋದಿ ಟೀಕಾಕಾರರು ಕೊರೊನಾ ನಿಯಂತ್ರಣದ ವೈಫಲ್ಯಕ್ಕೆ ಪೂರ್ಣ ಪ್ರಧಾನಿ ಮೋದಿಯೇ ಕಾರಣ ಎಂದು ಟೀಕಿಸಿದ್ದು, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಸಂಕಷ್ಟದ ಸಮಯವನ್ನು ನಿಭಾಯಿಸಲು ಸರ್ಕಾರದ ನಾಯಕತ್ವ ವಹಿಸಿರುವವರಿಂದ ಸಾಧ್ಯವಾಗಿಲ್ಲ. ಕೊರೊನಾ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ೩ ಲಕ್ಷ ಸೋಂಕು ಪ್ರಕರಣಗಳು ದೃಢಪಟ್ಟು, ಸೋಂಕಿತರಿಗೆ ಚಿಕಿತ್ಸೆ, ಆಮ್ಲಜನಕ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಆಮ್ಲಜನಕ ಈ ಕೊರತೆಗೆ ರಾಜ್ಯಸರ್ಕಾರಗಳೇ ಹೊಣೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆಮ್ಲಜನಕ ಪೂರೈಕೆಯ ತೊಂದರೆಯಿಲ್ಲ. ಆದರೆ, ವಿತರಣೆಯ ಅಸಮರ್ಪಕ ನಿರ್ವಹಣೆಯಿಂದ ಈ
ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಅವರು ಹೇಳಿ ರಾಜ್ಯಸರ್ಕಾರಗಳು ಸರಿಯಾದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ.
ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ ಪರ-ವಿರೋಧಿಗಳ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಮುಂದುವರೆದಿದೆ.