೧.೫೨ ಕೋಟಿ ಡ್ರಗ್ಸ್ ವಶ ೭ ಮಂದಿ ಸೆರೆ

ಬೆಂಗಳೂರು,ಜ.೩೦-ಮಾದಕ ವಸ್ತುಗಳ ಮಾರಾಟ ಸೇವನೆ ಸಾಗಾಣಿಕೆ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು
ನಾಲ್ವರು ಅಂತರಾಷ್ಟೀಯ ಸೇರಿ ೭ ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೧ಕೋಟಿ ೫೨ ಲಕ್ಷ ೫೦ ಸಾವಿರ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ರಿತ್ವಿಕ್ ರಾಜ್,ಅಭಿಷೇಕ್, ಗೌತಮ್, ಖರ್ಬಾಸ್ ಸೇರಿ ಬಂಧಿತ ೭ ಮಂದಿ ಡ್ರಗ್ ಪೆಡ್ಲರ್ ಗಳಿಂದ ೧ಕೋಟಿ ೫೨ ಲಕ್ಷ ೫೦ ಸಾವಿರ ಮೌಲ್ಯದ ೯೨.೧೯ ಗ್ರಾಂ ತೂಕದ ೨೧೯ ಎಕ್ಸ್‌ಟೆಸಿ ಪಿಲ್ಸ್, ೫೦೫ ಗ್ರಾಂ ಎಂಡಿಎಂಎ ಕ್ರಿಸ್ಟಲ್, ೧೩೦ ಗ್ರಾಂ ತೂಕದ ಚರಸ್, ೧೦೦.೮೮ ಗ್ರಾಂ ತೂಕದ ಕೊಕೇನ್,ಬೈಕ್,೬ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಬೆಂಗಳೂರು ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು ಮತ್ತು ಪುಲಿಕೇಶಿನಗರ ಠಾಣಾ ಸರಹದ್ದುಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ೩ ಭಾರತೀಯ ಮತ್ತು ೪ ವಿದೇಶಿ ಮೂಲದ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದ್ದು ಆರೋಪಿಗಳು ಬೇರೆ ಕಡೆಗಳಿಂದ ಡ್ರಗ್ಸ್ ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದರು.