೧.೪ ಲಕ್ಷ ದಾಟಿದ ಹಜ್ ಯಾತ್ರಿಕರ ಸಂಖ್ಯೆ

ನವದೆಹಲಿ,ಏ.೪- ವರ್ಷದಿಂದ ವರ್ಷಕ್ಕೆ ಹಜ್ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ವರ್ಷ ಹಜ್ ಯಾತ್ರಿಕರ ಸಂಖ್ಯೆ ೧.೪ ಲಕ್ಷ ದಾಟಿದೆ ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಖಾತೆ ಸಚಿವಾಲಯ ಮಾಹಿತಿ ನೀಡಿದೆ.
ಮೆಹ್ರಮ್-ಪುರುಷ ಸಹಚರ ಇಲ್ಲದೆ ಪ್ರಯಾಣಿಸಲಿರುವ ೪೫ ವರ್ಷಕ್ಕಿಂತ ಮೇಲ್ಪಟ್ಟ ೪,೩೦೦ ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿರುವ ಅತಿದೊಡ್ಡ ತಂಡ ಹೊಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರ ಹಜ್ ಯಾತ್ರಿಕರಿಗೆ “ನಗದು ರಹಿತ” ತೀರ್ಥಯಾತ್ರೆಗೆ ವಿಶೇಷ ವ್ಯವಸ್ಥೆ ಮಾಡಿದೆ. ಪ್ರಯಾಣಿಕರ ವಿದೇಶಿ ವಿನಿಮಯದ ಅವಶ್ಯಕತೆ ಪೂರೈಸುವುದು. ಎಲ್ಲಾ ಹಜ್ ಯಾತ್ರಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಾರೆಕ್ಸ್ ಕಾರ್ಡ್ ಒದಗಿಸಲಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವರ್ಷ ಹಜ್‌ಗೆ ಅರ್ಜಿ ಮತ್ತು ಆಯ್ಕೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಯಿತು. ಆಯ್ಕೆಯಾದ ೧.೪ ಲಕ್ಷ ಯಾತ್ರಾರ್ಥಿಗಳಲ್ಲಿ ೧೦,೬೨೧ ಮಂದಿ ೭೦ಕ್ಕೂ ಹೆಚ್ಚು ವಯೋಮಾನದವರು ಮತ್ತು ೪೫ ವರ್ಷ ಮೇಲ್ಪಟ್ಟ ೪,೩೧೪ ಮಹಿಳೆಯರು ಮೆಹ್ರಮ್ (ಪುರುಷ ಸಂಗಾತಿ) ಇಲ್ಲದೆ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಪುರುಷ ಸದಸ್ಯರಿಲ್ಲದೆ ಏಕಾಂಗಿಯಾಗಿ ಹಜ್‌ಗೆ ತೆರಳುತ್ತಿರುವ ಮಹಿಳೆಯರ ಅತಿ ದೊಡ್ಡ ತಂಡ ಇದಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹಜ್ ಮಾಡಲು ೧.೮ ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆ ಪಡೆದುಕೊಂಡ ೧.೪ ಲಕ್ಷ ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಅವರಿಗೆ ನಗದು ರಹಿತವಾಗಿ ಹಜ್ ಯಾತ್ರೆ ವಿಶೇಷ ಅವಕಾಶ ಮಾಡಿಕೊಡಲಾಗಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.