೧.೧೦ ಕೋಟಿ ವೆಚ್ಚದ ಕೋಡಿಹಳ್ಳಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ

ಮಾನ್ವಿ,ಜು.೨೪-ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕನಾಗಿ ೪ ವರ್ಷಗಳ ಅಧಿಕಾರವಧಿಯಲ್ಲಿ ರಸ್ತೆಗಳ ಸುಧಾರಣೆ ಮತ್ತು ಆರೋಗ್ಯ, ಶಿಕ್ಷಣ ಸೇರಿದಂತೆ ಸಾರ್ವಜನಿಕರಿಗೆ ಅನೇಕ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ರಾಜಾವೆಂಕಟಪ್ಪನಾಯಕ ಹೇಳಿದರು.
ಶನಿವಾರ ತಾಲೂಕಿನ ಚೀಕಲಪರ್ವಿ ಮಾನ್ವಿ ಮಧ್ಯದಲ್ಲಿ ಬರುವ ಕೋಡಿಹಳ್ಳಿ ಸೇತುವೆ ನಿರ್ಮಿಸಲು ೨೦೨೦-೨೧ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ೧.೧೦ ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು.
ಮಾನ್ವಿಯಿಂದ ಚೀಕಲಪರ್ವಿ ಗ್ರಾಮದ ಮೂಲಕ ನೆರೆಯ ತೆಲಂಗಾಣಾ ಪ್ರದೇಶದ ಗ್ರಾಮಗಳಿಗೆ ತೆರಳಲು ಸಾರ್ವಜನಿಕರಿಗೆ ಮಾರ್ಗ ಮಧ್ಯದ ಕೋಡಿಹಳ್ಳಿ ಸೇತುವೆ ಕಳೆದ ೩೦-೪೦ ವರ್ಷಗಳಿಂದ ತೀರಾ ಆವ್ಯವಸ್ಥೆಯಿಂದ ತುಂಬಾ ತೊಂದರೆಯಾಗಿ ಪರಿಣಮಿಸಿತ್ತು. ಈ ಭಾಗದ ಜನರು ಚೀಕಲಪರ್ವಿ ಮಠ ಮತ್ತು ವಿಜಯದಾಸರ ಕಟ್ಟೆ ಸೇರಿದಂತೆ ನದಿ ಭಾಗದ ಗ್ರಾಮಗಳಿಗೆ ಮತ್ತು ಉರುಕುಂದಿ ಈರಣ್ಣ ದೇವಸ್ಥಾನಕ್ಕೆ ಸುಗಮವಾಗಿ ತೆರಳಲು ೨೦ ಕೋಟಿ ವೆಚ್ಚದಲ್ಲಿ ಮಾನ್ವಿ ಅಂಬೇಡ್ಕರ್ ವೃತ್ತದಿಂದ ಚೀಕಲಪರ್ವಿವರಗೆ ಸುಸಜ್ಜಿತ ಡಾಂಬರೀಕರಣ ರಸ್ತೆಯನ್ನು ನಿರ್ಮಿಸಲಾಗಿದೆ. ಹಾಗೂ ಕೋಡಿಹಳ್ಳಿ ಸೇತುವೆ ಸಮಸ್ಯೆಯನ್ನರಿತು ಕೆಕೆಆರ್‌ಡಿಬಿ ಯೋಜನೆಯ ೧.೧೦ ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕಳೆದ ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಅಮರೇಶ್ವಕ್ಯಾಂಪ್‌ನಿಂದ ಹೊಸೂರು, ಚಿಕ್ಕಕೊಟ್ನೆಕಲ್ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಮತ್ತು ರೈತರು ತಮ್ಮ ಹೊಲಗದ್ದೆಗಳಿಗೆ ತೆರಳಲು ರಸ್ತೆಗಳ ನಿರ್ಮಾಣ ಮಾಡಿದ್ದೇನೆ. ಮಾನ್ವಿ ಪಟ್ಟಣದಲ್ಲಿ ಮುಖ್ಯರಸ್ತೆ ಹಾಗೂ ಸಿಸಿ ರಸ್ತೆ, ವಿದ್ಯುತ್, ಚರಂಡಿ ನಿರ್ಮಾಣ ಸೇರಿದಂತೆ ಅನೇಕ ರೀತಿಯ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಕಾರ್ಯಗತಗೊಳಿಸಿರುವ ಸಂತೃಪ್ತಿಯಿದೆ ಎಂದು ರಾಜಾವೆಂಕಟಪ್ಪನಾಯಕ ಹೇಳಿದರು.
ತಾಲೂಕಿನ ಮುಷ್ಠೂರು, ದೋತರಬಂಡಿ ಹಳ್ಳದ ಸೇತುವೆಗಳ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರ್ಕಾರ ಕೋವಿಡ್ ನೆಪವೊಡ್ಡಿ ಅನುದಾನ ಬಿಡುಗಡೆಗೆ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ಶಾಸಕರು ಆದಷ್ಟು ಬೇಗನೆ ಮುಷ್ಠೂರು, ದೋತರಬಂಡಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಶತಾಯಗತಾಯ ಪ್ರಯತ್ನಪಡುವುದಾಗಿ ಎಂದರು.
ಕ್ಷೇತ್ರದ ಜನತೆಗೆ ನೀಡಿದ ಭರವಸೆಯನುಸಾರ ರಸ್ತೆಗಳ ನಿರ್ಮಾಣ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ, ಆರೋಗ್ಯ ಕೇಂದ್ರಗಳ ಬಲವರ್ಧನೆಗೆ ಕ್ರಮ ಹಾಗೂ ದೇವಸ್ಥಾನ, ಮಸೀದಿ, ಚರ್ಚುಗಳು ಸೇರಿದಂತೆ ಎಲ್ಲಾ ವರ್ಗದ ಜನರ ಬೇಡಿಕೆಯನುಸಾರ ಅನುದಾನ ನೀಡಿದ್ದೇನೆ. ಚೀಕಲಪರ್ವಿ ಪ್ರಸಿದ್ದಿ ಶ್ರೀರುದ್ರಮುನೀಶ್ವರ ಮಠಕ್ಕೆ ೫೦ ಲಕ್ಷ ಅನುದಾನ ಹಾಗೂ ಮದ್ಲಾಪುರ ಗ್ರಾಮದ ಒಳರಸ್ತೆ ನಿಮಾಣಕ್ಕೆ ೫೨ ಲಕ್ಷ ಅನುದಾನ, ೬೦ ಲಕ್ಷ ವೆಚ್ಚದಲ್ಲಿ ಸಿಸಿರಸ್ತೆಗಳ ನಿರ್ಮಾಣ ಹಾಗೂ ಈ ಭಾಗದ ಪ.ಜಾ.ಪ.ಪಂ.ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಲು ತಲಾ ೫೦ ಲಕ್ಷ ವೆಚ್ಚದಲ್ಲಿ ಏತ ನೀರಾವರಿ ಸೌಲಭ್ಯ ಕಲ್ಪಿಸಿರುವುದಾಗಿ ರಾಜಾವೆಂಕಟಪ್ಪನಾಯಕ ಹೇಳಿದರು.
ಈ ಸಂಧರ್ಬದಲ್ಲಿ ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಠದ ಶ್ರೀಸದಾಶಿವ ಮಹಾಸ್ವಾಮಿ, ನಿರಂಜನ್ ದೇವರು ಮೈಸೂರು, ಶರಣಬಸವ ದೇವರು ಅರಹಳ್ಳಿ, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾರಾಮಚಂದ್ರನಾಯಕ, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಜೆಡಿಎಸ್ ರಾಜ್ಯ ಸಂಘಟನಾಕಾರ್ಯದರ್ಶಿ ಸೈಯದ್ ಹುಸೇನ್ ಸಾಹೇಬ್, ನಗರ ಘಟಕ ಅಧ್ಯಕ್ಷ ಖಲೀಲ್ ಖುರೇಶಿ, ತಾಲೂಕ ವೈಧ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ, ಮುಖಂಡರಾದ ಗೋಪಾಲನಾಯಕ ಹರವಿ, ಕೆ.ವೆಂಕಟೇಶನಾಯಕ, ಶರಣಪ್ಪಗೌಡ ಮದ್ಲಾಪುರ, ಹನುಮಂತ ಭೋವಿ, ಆರ್.ಬಸವರಾಜಶೆಟ್ಟಿ, ಹಬೀಬ್ ನದಾಪ್, ಬುಡ್ಡಪ್ಪನಾಯಕ, ಯಲ್ಲಪ್ಪನಾಯಕ ವಕೀಲ, ಗ್ರಾ.ಪಂ.ಸದಸ್ಯರಾದ ಮರೇಗೌಡ ಬುದ್ದಿನ್ನಿ, ಚಂದ್ರಪ್ಪಗೌಡ, ಖಾಸಿಂ, ತಿಮ್ಮಣ್ಣಗೌಡ, ಬಸವ ಕಬ್ಬೇರ್, ರುದ್ರಗೌಡ, ಹುಸೇನಿನಾಯಕ, ರಂಗಪ್ಪನಾಯಕ, ರವಿ, ಕಾಶೀನಾಥ, ನಾಗಲಿಂಗ, ಲಕ್ಷ್ಮಣ್, ತಾಜುದ್ದೀನ್, ಹನುಮಂತ, ರಫಿ ಹಾಗೂ ಆರೋಗ್ಯಾಧಿಕಾರಿಗಳಾದ ಡಾ.ರಾಜೇಂದ್ರ, ಮಂಜುಳಾ, ಬಾಲಪ್ಪನಾಯಕ, ಶರಣಪ್ಪ, ವಿರೂಪಾಕ್ಷಯ್ಯಸ್ವಾಮಿ, ವೆಂಕಟೇಶ್ವರರಾವ್, ದೇವೇಗೌಡ ಉದ್ಬಾಳ್, ರಾಮಣ್ಣ ಭೋವಿ, ಮೌಲಪ್ಪ ಚೀಕಲಪರ್ವಿ, ಹನುಮಂತನಾಯಕ, ಹನುಮಪ್ಪನಾಯಕ ರಬ್ಬಣಕಲ್, ಹುಸೇನಪ್ಪ, ವಿಜಯನಾಯಕ ಕೊಟ್ನೆಕಲ್, ಪಿಡಬ್ಲ್ಯುಡಿ ಜೆಇ ಮಸ್ತಾನ್, ಗುತ್ತೇದಾರ ರಹೀಮ್‌ಪಾಷ ಸೇರಿದಂತೆ ಇನ್ನಿತರರಿದ್ದರು.