೧೯ ವರ್ಷದ ಯುವತಿಯ ಹೊಟ್ಟೆಯಲ್ಲಿ ೭.೫ ಕೆಜಿ ಗಡ್ಡೆ

ಬೆಂಗಳೂರು, ಮಾ. ೭- ೧೯ ವರ್ಷ ವಯಸ್ಸಿನ ಯುವತಿಯ ಹೊಟ್ಟೆಯಲ್ಲಿದ್ದ ೭.೫ ಕೆಜಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ನಗರದ ಯುವತಿಯ ಹೊಟ್ಟೆಯ ಸುತ್ತಳತೆಯ ತೂಕ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾಗಿದೆ.
ಯುವತಿಯ ಹೊಟ್ಟೆ ಸುತ್ತಳತೆ ನಿರಂತರವಾಗಿ ಹೆಚ್ಚಳವಾಗಿದ್ದರಿಂದ ಯುವತಿಯ ಪೋಷಕರು ಆತಂಕಕ್ಕೆ ಒಳಗಾಗಿ ವಿದ್ಯಾರಣ್ಯಪುರ ಸಮೀಪವಿರುವ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್.ನಿರಂತರ ಅವರು ತಪಾಸಣೆ ನಡೆಸಿ ಪರೀಕ್ಷೆಗೊಳಪಡಿಸಿದಾಗ ಗರ್ಭಕೋಶದಲ್ಲಿ ೭.೫ ಕೆಜಿಯಷ್ಟು ಗಡ್ಡೆ ಇರುವುದು ಪತ್ತೆಯಾಗಿದೆ.
ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆಯುವಲ್ಲಿ ಡಾ. ಚೈತ್ರಾ ಎಸ್. ನಿರಂತರ, ಡಾ ನಂದ ಕುಮಾರ್ ಮತ್ತು ತಂಡ ಯಶಸ್ವಿಯಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ಯುವತಿ ಆರೋಗ್ಯವಾಗಿದ್ದು ಪೋಷಕರ ಆತಂಕ ದೂರವಾಗಿದೆ.