
ಬೆಂಗಳೂರು,ಸೆ.೧೩-ಪ್ರಸಕ್ತ ಸಾಲಿನ ಮುಂಗಾರು ವಿಫಲಗೊಂಡ ಹಿನ್ನೆಲೆ, ರಾಜ್ಯದ ೧೯೫ ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ರಾಜ್ಯದಲ್ಲಿ ತೀವ್ರ ಬರ ಕಾಡುತ್ತಿರುವ ಹಿನ್ನೆಲೆ, ನರೇಗಾ ಉದ್ಯೋಗವನ್ನು ೧೦೦ ದಿನದಿಂದ ೧೫೦ ದಿನಗಳಿಗೆ ಏರಿಕೆ ಮಾಡಲಾಗಿದೆ. ಉಳಿದಂತೆ ಬರಪೀಡಿತ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು, ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬರಪೀಡಿತ ಪ್ರದೇಶಗಳ ಘೋಷಣೆಗೆ ಸಂಬಂಧಿಸಿದಂತೆ ಇಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ರಾಜ್ಯದ ೧೯೫ ತಾಲುಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ನಂತರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮಳೆ ಕೊರತೆಯಿರುವ ಪ್ರದೇಶಗಳಲ್ಲಿ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಸಭೆಯಲ್ಲಿ ಚರ್ಚೆ ಕೈಗೊಳ್ಳಲಾಯಿತು. ಬೆಳೆ ಸಮೀಕ್ಷೆ ಅನ್ವಯ ಹಾಗೂ ಕೇಂದ್ರದ ನಿಯಮದನ್ವಯ ೬೨ ತಾಲೂಕುಗಳು ಬರಪೀಡಿತ ಪ್ರದೇಶ ವ್ಯಾಪ್ತಿಯಲ್ಲಿ ಬರಲಿದೆ. ೧೩೪ ತಾಲೂಕುಗಳ ಬೆಳೆ ಸಮೀಕ್ಷೆಯ ನಂತರ ಕಳೆದ ಉಪ ಸಮಿತಿ ಸಭೆಯಲ್ಲಿ ಸರ್ಕಾರ ಕೈಗೊಂಡಿತ್ತು. ಒಟ್ಟು ೧೯೫ ತಾಲೂಕುಗಳಲ್ಲಿ ಮುಂಗಾರು ವಿಫಲಗೊಂಡಿದ್ದು, ಅವುಗಳಲ್ಲಿ ೧೬೧ ಬರ ಹಾಗೂ ೩೪ ತಾಲೂಕು ಸಾಧಾರಣಾ ಬರಪೀಡಿತ ಪ್ರದೇಶ, ಒಟ್ಟು ೧೯೫ ತಾಲೂಕುಗಳು ಬರಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ. ೪೦ ತಾಲೂಕುಗಳಲ್ಲಿ ತೇವಾಂಶ ಕಂಡು ಬಂದಿದೆ. ರಾಜ್ಯದ ಬರಪೀಡಿತ ಪ್ರದೇಶಗಳ ಪರಿಸ್ಥಿತಿ ಕುರಿತಂತೆ ಲಭ್ಯವಿರುವ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಸದ್ಯ ಬರಪೀಡಿತ ತಾಲೂಕುಳಿಗೆ ಸಂಬಂಧಿಸಿದಂತೆ ಸಿದ್ಧ ಪಡಿಸಿರುವ ಪಟ್ಟಿ ಅಂತಿಮವಲ್ಲ ಇನ್ನು ೧೫ ದಿನಗಳ ಕಾಯ್ದು ಎರಡನೇ ಸುತ್ತಿನಲ್ಲಿ ಬರ ಘೋಷಣೆ ಮಾಡಲಾಗುವುದು. ಪ್ರಸ್ತುತ ಸಮೀಕ್ಷೆ ಅನ್ವಯ ಲಭ್ಯವಿರುವ ವರದಿ ಅನ್ವಯ ೧೯೫ ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿವೆ. ಆದರೆ ಈಗಿರುವ ತಾಲೂಕುಗಳಿಗಿಂತ ಇನ್ನು ಹೆಚ್ಚಿನ ಪ್ರದೇಶಗಳು ಬರಪೀಡಿತ ಪ್ರದೇಶಗಳಿಗೆ ಒಳಪಡಬಹುದಾದ ಸಾಧ್ಯತೆ. ಮಲೆನಾಡು ಭಾಗದಲ್ಲೂ ತೀವ್ರ ನೀರಿನ ಕೊರತೆ ಉಂಟಾಗಿದ್ದು, ನಮಗೆ ನೀರು ದೊರಕುತ್ತಿಲ್ಲ ಎಂದ ಅವರು, ರಾಜ್ಯದಲ್ಲಿ ಒಟ್ಟಾರೆ ಶೇ.೪೦ ರಷ್ಟು ಬರದ ಪರಿಸ್ಥಿತಿ ಇದ್ದು, ದಕ್ಷಿಣ ಒಳನಾಡಿನಲ್ಲೂ ಬರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
೧೯೫ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು ೧೧೩ ತಾಲೂಕುಗಳನ್ನು ಆಯ್ಕೆ ಮಾಡಿ ಸಮೀಕ್ಷೆಗೆ ಸೂಚಿಸಲಾಗಿತ್ತು. ಆದರೆ ೧೯೫ ತಾಲೂಕುಗಳಲ್ಲಿ ಮುಂಗಾರು ವಿಫಲಗೊಂಡ ಹಿನ್ನೆಲೆ, ಬರ ಆವರಿಸಿದೆ ಎಂದು ತಿಳಿಸಿದ ಅವರು ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆ, ರಾಜ್ಯದಲ್ಲಿ ಬರ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಗಾರು ವಿಫಲಗೊಂಡ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಸರ್ಕಾರ ಕಳೆದ ಸೆಪ್ಟೆಂಬರ್ ೩ ರಂದು ತೀರ್ಮಾನ ಮಾಡಿತ್ತು. ಆದರೆ ಇನ್ನು ಹೆಚ್ಚು ತಾಲೂಕುಗಳಲ್ಲಿ ಮಳೆ ವಿಫಲವಾಗಿರುವುದು ಕಂಡು ಬಂದ ಹಿನ್ನೆಲೆ, ಪ್ರಸ್ತುತ ೧೯೫ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.
ಬರಪೀಡಿತ ತಾಲೂಕುಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪಟ್ಟಿ ಮಾಡಲಾಗಿದೆ. ಕಳೆದ ಆಗಸ್ಟ್ ೧೮ರಂದು ೧೧೩ ತಾಲೂಕುಗಳನ್ನು ಬರಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಡಿಸಲಾಯಿತು. ನಂತರ ಆಗಸ್ಟ್ ೩೧ರಂದು ಹೊಸದಾಗಿ ೭೫ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಪರಿಗಣಿಸಿ ಪಟ್ಟಿ ಮಾಡಲಾಗಿತ್ತು.
ಬರಪೀಡಿತ ಪ್ರದೇಶದ ಎರಡನೇ ಪಟ್ಟಿಯನ್ನು ಘೋಷಿಸಲು ಸರ್ಕಾರ ತೀರ್ಮಾನ ಮಾಡಲಾಗಿತ್ತು. ಈ ವೇಳೆ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿರುವ ಮಾನದಂಡವನ್ನು ಸಡಿಲಿಕೆ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಸೂಚಿಸಿತ್ತು. ತಾಲೂಕುಗಳಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ, ಬೆಳೆ ಸಮೀಕ್ಷೆ ನಡೆಸಿ ಹಾಳಾಗಿರುವ ಬೆಳೆಯ ಪ್ರಮಾಣ ವರದಿ ಆಧಾರಿಸಿ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಿದ್ದ ಸರ್ಕಾರ ೩ ವಾರಗಳಲ್ಲಿ ಶೆ.೬೦ಕ್ಕಿಂತ ಹೆಚ್ಚು ಮಳೆ ಕೊರತೆ ಬಂದಾಗ ಮಾತ್ರ ಬರಪೀಡಿತ ಪ್ರದೇಶ ಘೋಷಣೆಗೆ ಸಾಧ್ಯವಾಗಲಿದೆ ಎಂದಿದ್ದು, ಈ ಸಂಬಂಧ ಎಲ್ಲಾ ವರದಿಗಳನ್ನು ತರಿಸಿಕೊಂಡ ಸರ್ಕಾರ ಇದೀಗ ಮಳೆ ಕೊರತೆ ಒಳಗಾಗಿರುವ ೧೯೫ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಪಟ್ಟಿ ಮಾಡಿದೆ. ಹಾಗೂ ಇಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ರಾಜ್ಯದ ೧೯೫ ತಾಲೂಕುಗಳಲ್ಲಿ ಕಾಡುತ್ತಿರುವ ಬರದ ವರದಿ ಆಧಾರಿಸಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಜುಲೈ ೨೧ ರಂದು ಬರಪೀಡಿತ ಪ್ರದೇಶ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡ ಬದಲಿಸುವಂತೆ ಕೇಂದ್ರಕ್ಕೆ ರಾಜ್ಯಸರ್ಕಾರ ಪತ್ರ ಬರೆಯಲಿದೆ ಎಂದು ಸಚಿವ ಕೃಷ್ಣೆಬೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದರು. ಬರಪೀಡಿತ ಪ್ರದೇಶ ಘೋಷಣೆಯನ್ನು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಘೋಷಣೆ ಮಾಡಬೇಕೆನ್ನುವ ಮಾನದಂಡವಿದೆ. ಆದರೆ ಈ ನಿಯಮವನ್ನು ಅನುಸರಿಸಿದರೆ, ರಾಜ್ಯದ ಬರಪೀಡಿತ ಘೋಷಣೆ ಸಾಧ್ಯವಾಗುವುದಿಲ್ಲ ಒಂದು ವೇಳೆ ಕೇಂದ್ರದ ಮಾನದಂಡವನ್ನು ಬದಿಗಿಟ್ಟು ಬರಪೀಡಿತ ಪ್ರದೇಶ ಘೋಷಣೆ ಮಾಡಿದರೆ ಕೇಂದ್ರದಿಂದ ದೊರೆಯುವ ಬರ ಪರಿಹಾರ ಅನುದಾನಗಳು ದೊರೆಯದಿರುವ ಹಿನ್ನೆಲೆಯಲ್ಲಿ ಮಾನದಂಡಗಳನ್ನ ಬದಲಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಕೇಂದ್ರ ಸರ್ಕಾರ ೨೦೦೨ರಲ್ಲಿ ಬರ ಪೀಡಿತ ಪ್ರದೇಶ ಘೋಷಣೆಗೆ ಮಾನದಂಡಗಳನ್ನು ನಿಗದಿ ಮಾಡಿದೆ. ಈ ಮಾನದಂಡದ ಅನ್ವಯ ಗಂಭೀರ ಹಾಗೂ ಮಧ್ಯಮ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.