೧೮ ವರ್ಷದವರಿಗೆ ಲಸಿಕೆ ಆಪ್ ಮೂಲಕ ನೊಂದಾಣಿ


ನವದೆಹಲಿ,ಏ.೨೨-ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. ೧ ರಿಂದ ೧೮ವರ್ಷದ ಎಲ್ಲರಿಗೂ ಕೊರೊನಾ ಲಸಿಕೆ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು ಈ ತಿಂಗಳ ೨೪ ರಿಂದ ಕೋವಿನ್ ಆಪ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
೧೮ ವರ್ಷ ದಾಟಿದ ಎಲ್ಲಾ ಮಂದಿ ಲಸಿಕೆ ಹಾಕಿಸಿಕೊಳ್ಳಲು ಕಡ್ಡಾಯವಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಮುಂದಿನ ೪೮ ಗಂಟೆ ಬಳಿಕ ಕೋವಿನ್ ವೇದಿಕೆ ನೋಂದಣಿಗೆ ತೆರೆದಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿಶ್ವದಲ್ಲಿ ಭಾರತದಲ್ಲಿ ಅತಿ ಹೆಚ್ಚಿನ ಮಂದಿಗೆ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಧೃಢಪಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಮುಂದಾಗಿದೆ.
ಲಸಿಕೆ ಹಾಕುವ ಉದ್ದೇಶದಿಂದ ಸರ್ಕಾರ ಮತ್ತು ಖಾಸಗೀ ಆಸ್ಪತ್ರೆಗಳು ನೇರವಾಗಿ ಲಸಿಕೆ ಖರೀದಿ ಮಾಡುವ ಅವಕಾಶ ಒದಗಿಸಿಕೊಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಪಡೆಯ ಸಿಬ್ಬಂಧಿ, ೬೦ ವರ್ಷ ದಾಟಿದ ಹಿರಿಯ ನಾಗರಿಕರು, ೪೫ ವರ್ಷ ದಾಟಿದ ವಿವಿಧ ಕಾಯಿಲೆಯಿಂದ ಬಳಲುವ ಮಂದಿ, ೪೫ ವರ್ಷ ದಾಟಿದ ಸಾಮಾನ್ಯ ಜನರಿಗೆ ಲಸಿಕೆ ನೀಡಲಾಗುತ್ತಿದೆ.
ಮೇ ೧ ರಿಂದ ೧೮ ವರ್ಷ ದಾಟಿದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೋವಿನ್ ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರಲಿದೆ. ಅದನ್ನು ನಮೂದಿಸಿ, ಲಿಂಗ, ವಯಸ್ಸು, ಹುಟ್ಟಿದ ದಿನಾಂಕ ಸೇರಿದಂತೆ ಇನ್ಜಿತರೆ ಮಾಹಿತಿ ನೀಡಿ ನೋಂದಾಯಿಸಬಹುದಾಗಿದೆ.
ನೋಂದಾಯಿಸಿಕೊಂಡವರಿಗೆ ಯಾವಾಗ ಲಸಿಕೆ ಪಡೆಯಬೇಕು ಎನ್ನುವ ಆಯ್ಕೆ ಇರುತ್ತದೆ ನೀವು ಅದನ್ನು ಕ್ಲಿಕ್ ಮಾಡಿ ನಿಮಗೆ ಸೂಕ್ತವಾದ ದಿನಾಂಕ ನಿಗಧಿ ಮಾಡಿಕೊಳ್ಳಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.