೧೮ @ ಲಸಿಕೆ ಕೊರತೆ


ನವದೆಹಲಿ,ಏ,೨೬- ದೇಶದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ.೧ ರಿಂದ ೧೮ ದಾಟಿದ ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆದರೆ ದೇಶದ ನಾಲ್ಕು ರಾಜ್ಯಗಳು ನಮ್ಮಲ್ಲಿ ಲಸಿಕೆ ಲಭ್ಯವಿಲ್ಲ ಮೇ.೧ ರಿಂದ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುವ ಖಡಕ್ ಸಂದೇಶದವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿವೆ.
ಕಾಂಗ್ರೆಸ್ ಆಢಳಿತವಿರುವ ರಾಜ್ಯಗಳಾದ ರಾಜಸ್ತಾನ, ಛತ್ತೀಸ್‌ಗಡ, ಪಂಜಾಬ್ ಮತ್ತು ಮೈತ್ರಿ ಸರ್ಕಾರವಿರುವ ಜಾರ್ಖಾಂಡ್‌ನಲ್ಲಿ ಲಸಿಕೆ ಅಲಭ್ಯತೆಯಿಂದ ಮೇ.೧ ರಿಂದ ಲಸಿಕೆ ಹಾಕಲು ಸಾದ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿವೆ.
ಭಾರತೀಯ ಸೆರಂ ಸಂಸ್ಥೆ ಮೇ.೧೫ ರವೆರಗೆ ಸಲಿಕೆಯನ್ನು ರಾಜಸ್ತಾನಕ್ಕೆ ಪೂರೈಕೆ ಮಾಡುವುದು ಕಷ್ಟ ಎಂದು ಹೇಳಿದೆ. ಹೀಗಾಗಿ ರಾಜಸ್ತಾನದಲ್ಲಿ ಲಸಿಕೆ ಅಭಿಯಾನ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಲಸಿಕೆ ಹಾಕಲು ಐದು ದಿನ ಬಾಕಿ ಇದೆ, ಹೀಗಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಸೆರಂ ಮಾತ್ರ ಹೇಳಿದ್ದನ್ನೇ ಹೇಳುತ್ತಿದೆ ಎಂದು ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
ಸೆರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆಯನ್ನು ಎಷ್ಟು ಬೇಗ ಪೂರೈಕೆ ಮಾಡುತ್ತದೋ ಅಷ್ಟು ಬೇಗ ನಾವೂ ರಾಜಸ್ತಾನದಲ್ಲಿ ಲಸಿಕೆ ಹಾಕಲು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ರಾಜಸ್ತಾನದಲ್ಲಿ ೧೮ ರಿಂದ ೪೫ ವರ್ಷ ವಯೋಮಾನದವರಿಗೆ ಲಸಿಕೆ ಹಾಕಲು ೩.೧೩ ಕೋಟಿ ಲಸಿಕೆ ಅಗತ್ಯವಿದೆ. ಕೇಂದ್ರ ಸರ್ಕಾರ ಲಸಿಕೆ ಹಾಕುತ್ತೇವೆ ಎಂದು ಪ್ರಕಟಿಸುವುದು ಮಾತ್ರವಲ್ಲ ನಿಗಧಿತ ಸಮಯದಲ್ಲಿ ಎಲ್ಲಾ ರಾಜ್ಯಗಳಿಗೆ ಲಸಿಕೆ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ಲಸಿಕೆ ನೀಡುವಂತೆ ಪುಣೆಯ ಭಾರತೀಯ ಸೆರಂ ಸಂಸ್ಥೆ ಮತ್ತು ಹೈದರಾಬಾದ್ ಭಾರತ್ ಭಯೋಟೆಕ್ ಸಂಸ್ಥೆಗೆ ಸೂಚನೆ ನೀಡಬೇಕು.ಅದನ್ನು ಬಿಟ್ಟು ಲಸಿಕೆ ಲಭ್ಯತೆ ಇಲ್ಲದೆ ಲಸಿಕೆ ಹಾಕಿ ಎಂದರೆ ಇದು ಹೇಗೆ ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಈ ಎರಡೂ ಸಂಸ್ಥೆಗಳು ನಿಗಧಿ ಮಾಡಿರುವ ದರವನ್ನು ನೀಡಲು ನಾವು ಸಿದ್ದವಿದ್ದೇವೆ.ನಮಗೆ ಸಕಾಲದಲ್ಲಿ ಲಸಿಕೆ ಪೂರೈಕೆ ಮಾಡಲು ತಿಳಿಸಿ ಎಂದು ಕೇಂದ್ರ ಸರ್ಕಾರದ ಮೇಲೆ ಅವರು ಒತ್ತಡ ಹಾಕಿದ್ದಾರೆ.
ಅದೇ ರೀತಿ ಛತ್ತೀಸ್‌ಗಡ, ಪಂಜಾಬ್ ಮತ್ತು ಜಾರ್ಖಾಂಡ್ ರಾಜ್ಯಗಳ ಸರ್ಕಾರವೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.