೧೮೬ ಭಾರತೀಯರು ವಾಪಸ್

ಖಾರ್ಟೊಮ್ (ಸುಡಾನ್), ಮೇ ೧- ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸದ್ಯ ಪರಿಸ್ಥಿತಿ ಬಿಗಡಾಯಿಸಿರುವ ಹಿನ್ನೆಲೆಯಲ್ಲಿ ವಿದೇಶಿ ನಾಗರಿಕರು ದೇಶ ತೊರೆಯುತ್ತಿದ್ದಾರೆ. ಇತ್ತ ಭಾರತ ತನ್ನ ನಾಗರಿಕರನ್ನು ರಕ್ಷಿಸಲು ಆರಂಭಿಸಿರುವ ಆಪರೇಶನ್ ಕಾವೇರಿ ಕಾರ್ಯಾಚರಣೆ ಮುಂದುವರೆದಿದೆ. ಈಗಾಗಲೇ ಜಿದ್ದಾದಿಂದ ಸುಮಾರು ೧೮೬ ಭಾರತೀಯರನ್ನು ಹೊತ್ತು ೯ನೇ ವಿಮಾನ ಹೊರಡಿದ್ದು, ಕೊಚ್ಚಿಗೆ ಆಗಮಿಸಲಿದೆ. ಇದುವರೆಗೆ ಸುಮಾರು ೨೩೦೦ಕ್ಕೂ ಹೆಚ್ಚಿನ ಭಾರತೀಯರನ್ನು ರಕ್ಷಿಸಲಾಗಿದೆ.
ಈಗಾಗಲೇ ಜಿದ್ದಾದಿಂದ ಅಪರೇಶನ್ ಕಾವೇರಿಯ ಒಂಭತ್ತನೇ ವಿಮಾನ ಜಿದ್ದಾದಿಂದ ಹೊರಡಿದ್ದು, ಕೊಚ್ಚಿಗೆ ಆಗಮಿಸಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಆರಿಂದಮ್ ಭಾಗ್ಚಿ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮುನ್ನ ನಿನ್ನೆ ಪ್ರತಿಕ್ರಿಯೆ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು, ಇದುವರೆಗೆ ಸುಮಾರು ೨೩೦೦ ಭಾರತೀಯರನ್ನು ರಕ್ಷಿಸಿ, ಸ್ವದೇಶಕ್ಕೆ ಕರೆತರಲಾಗಿದೆ ಎಂದು ತಿಳಿಸಿದ್ದರು. ಸಿ-೧೩೦ ಭಾರತೀಯ ವಾಯುಪಡೆಯ ವಿಮಾನವು ೪೦ ಪ್ರಯಾಣಿಕರೊಂದಿಗೆ ನವದೆಹಲಿಗೆ ಬಂದಿಳಿದಿದೆ. ಈ ಮೂಲಕ ಒಟ್ಟಾರೆಯಾಗಿ ಸುಮಾರು ೨,೩೦೦ ಜನರು ಭಾರತವನ್ನು ತಲುಪಿದ್ದಾರೆ ಎಂದು ಅವರು ತಿಳಿಸಿದ್ದರು. ಇನ್ನು ಎಂಟನೇ ವಿಮಾನ ಭಾರತಕ್ಕೆ ಆಗಮಿಸಿದ ವೇಳೆಯೇ ೨೩೦೦ ಭಾರತೀಯರು ಸ್ವದೇಶಕ್ಕೆ ಬಂದಂತಾಗಿದೆ. ಅಲ್ಲದೆ ನಂತರ ಇನ್ನೂ ಮೂರು ವಿಮಾನಗಳು ಕ್ರಮವಾಗಿ ೨೨೯, ೨೮೮ ಮತ್ತು ೧೩೫ ಪ್ರಯಾಣಿಕರನ್ನು ಹೊತ್ತು ಭಾರತಕ್ಕೆ ಆಗಮಿಸಿದೆ. ಈ ಮೂಲಕ ಒಟ್ಟಾರೆಯಾಗಿ ೨೫೦೦ಕ್ಕೂ ಹೆಚ್ಚು ಜನರನ್ನು ರಕ್ಷಿಸಿದಂತಾಗಿದೆ.