೧೮೦ಫೀಟ್ ಬೋರ್‌ಕೊರೆದರೂ ಸಿಗದ ಜಲ : ಕುಡಿವ ನೀರಿಗೆ ಜನರ ಹಾಹಾಕಾರ

ದೇವದುರ್ಗ.ಜ.೦೯- ತಾಲೂಕಿನ ಶಾವಂತಗೇರಾ ಗ್ರಾಪಂ ವ್ಯಾಪ್ತಿಯ ಹಂಚಿನಾಳದಲ್ಲಿ ಕುಡಿವ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಗ್ರಾಪಂ ಆಡಳಿತ ಮಂಡಳಿ ಹಾಗೂ ಸದಸ್ಯರು ಇಲ್ಲದೆ ಸಮಸ್ಯೆ ಯಾರಿಗೆ ಹೇಳಬೇಕು ಎನ್ನುವ ಧರ್ಮಸಂಕಟದಲ್ಲಿ ಗ್ರಾಮಸ್ಥರು ಸಿಲುಕಿದ್ದಾರೆ. ಜೀವಜಲಕ್ಕಾಗಿ ಹಳ್ಳ, ಎನ್‌ಆರ್‌ಬಿ ನಾಲೆಗೆ ಅಲೆಯುವಂತಾಗಿದೆ.
ಕೃಷ್ಣಾ ನದಿಯಿಂದ ೮ಕಿಮೀ ದೂರದಲ್ಲಿರುವ ಗ್ರಾಮ ವರ್ಷವಿಡಿ ನೀರಿಗಾಗಿ ಪರಿತಪಿಸುತ್ತಿದೆ. ಎಲ್ಲೆ ಬೋರ್‌ಕೊರೆದರೂ ಸಿಹಿನೀರು ಸಿಗುತ್ತಿಲ್ಲ. ೨ದಿನಗಳ ಹಿಂದೆ ೧೮೦ಅಡಿ ಬೋರ್‌ವೆಲ್ ಕೊರೆದರೂ ಒಂದಿಂಚೂ ನೀರು ಬಂದಿಲ್ಲ. ಗ್ರಾಮಸ್ಥರ ಒತ್ತಾಯ ಮೇರೆಗೆ ೨೦೦ಫೀಟ್ ಕೊರೆದರೆ ೧ಇಂಚಿಗಿಂತ ಕಡಿಮೆ ನೀರು ಬಂದಿದೆ. ಪರ್ಯಾವಾಗಿ ಇನ್ನೊಂದು ಬೋರ್‌ವೆಲ್ ಕೊರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
೨೦೦ ಮನೆಗಳಿದ್ದು, ೭೫೦ಮತದಾರರು ೧ಸಾವಿರ ಜನಸಂಖ್ಯೆಯಿದೆ. ಶಾವಂತಗೇರಾ ಗ್ರಾಪಂ ಚುನಾವಣೆಗೆ ತಡೆಯಾಜ್ಞೆಯಿದ್ದು ೧೦ವರ್ಷದಿಂದ ಸದಸ್ಯರೇ ಆಯ್ಕೆಯಾಗಿಲ್ಲ. ತಾಪಂ ಇಒ ಆಡಳಿತಾಧಿಕಾರಿ. ಗ್ರಾಮದಿಂದ ೨ಕಿಮೀ ದೂರದ ಶಾವಂತಗೇರಾದಲ್ಲಿ ಬೋರ್‌ವೆಲ್‌ನಿಂದ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಶ್ರೀಮಾರೆಮ್ಮ ಗುಡಿ, ನಾಗಲಿಂಗಯ್ಯ ತಾತನ ಮಠ ಹಾಗೂ ದೇವೇಂದ್ರಗೌಡರ ಮನೆಪಕ್ಕ ತೊಟ್ಟಿ ನಿರ್ಮಿಸಿ ನೀರು ಪೂರೈಸಲಾಗುತ್ತಿತ್ತು.
ನೀರುಪೂರೈಕೆ ಬಗ್ಗೆ ಗ್ರಾಮಸ್ಥರು, ಗ್ರಾಪಂ ಹಾಗೂ ರೈತನ ನಡುವೆ ಮಾತುಕತೆಯಾಗದೆ ನೀರು ತಿಂಗಳಿನಿಂದ ಬಂದಾಗಿದೆ. ನಿತ್ಯ ೨ಟ್ಯಾಂಕರ್ ನೀರು ಕಳಿಸುತ್ತಿದ್ದು, ಅದು ಬಕಾಸುರನಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಉಳ್ಳವರು ಬೈಕ್‌ನಲ್ಲಿ ನೀರು ತರುತ್ತಾರೆ. ಬಡವರಿಗೆ ಊರಿನ ಹಳ್ಳ ಹಾಗೂ ನಾಲೆ ನೀರು ಗತಿಯಾಗಿದೆ. ವಾರಬಂಧಿ ಹಾಕುವುದರಿಂದ ನೀರು ಸರಿಯಾಗಿ ಬರುತ್ತಿಲ್ಲ. ಇನ್ನು ಬೇಸಿಗೆಯಲ್ಲಿ ಗ್ರಾಮಸ್ಥರ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಿದೆ.
ದೀಪದ ಕೆಳಗೆ ಕತ್ತಲು
ಹಂಚಿನಾಳದಲ್ಲಿ ಎನ್‌ಆರ್‌ಬಿಸಿ ನಾಲೆ ಹರಿಯುತ್ತಿದೆ, ೮ಕಿಮೀ ಅಂತರದಲ್ಲಿ ಕೃಷ್ಣಾನದಿಯಿದ್ದರೂ ದೀಪದ ಕೆಳಗೆ ಕತ್ತಲು ಎನ್ನುವಂತೆ ವರ್ಷವಿಡಿ ಗ್ರಾಮ ಜೀವಜಲಕ್ಕಾಗಿ ಪರಿತಪಿಸುತ್ತಿದೆ. ಪ್ರಧಾನಮಂತ್ರಿ ಜಲಜೀವನ ಯೋಜನೆ ಪ್ರಾರಂಭವೇ ಮಾಡಿಲ್ಲ. ಕೃಷ್ಣಾನದಿ ನೀರು ಕಲ್ಪಿಸಿದರೆ ನೀರಿನ ದಾಹವೇ ನೀಗಲಿದೆ. ಕೆರೆ ನಿರ್ಮಿಸಿ ಎನ್‌ಆರ್‌ಬಿಸಿ ನೀರು ಸಂಗ್ರಹಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು. ಆದರೆ, ೧೦ವರ್ಷದಿಂದ ಗ್ರಾಪಂ ಆಡಳಿತ ಇಲ್ಲದೆ ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೀರಿನ ವಿಷಯ ಗ್ರಾಮಸ್ಥರು ಹಾಗೂ ಅಧಿಕಾರಿಗಳ ತಿಕ್ಕಾಟಕ್ಕೆ ಕಾರಣವಾಗಿದ್ದು, ಡಿಸಿಗೆ ದೂರೋಗಿದೆ.

ಕೋಟ್=====

ನೀರು ಬಿಡುವ ರೈತನಿಗೆ ೨ಮನೆಗಳನ್ನು ಮಂಜೂರು ಮಾಡಿದ್ದು, ವಿನಾಕಾರಣ ತಕರಾರು ಮಾಡುತ್ತಿದ್ದಾರೆ. ಪಿಡಿಒ ಆಟಕ್ಕುಂಟು ಲೆಕ್ಕಕ್ಕಿಲ್ಲ. ತಾಪಂ ಇಒಗೆ ಆಡಳಿತಾಧಿಕಾರಿಯಾಗಿದ್ದು, ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಹಳ್ಳ, ನಾಲೆ ನೀರೆಗತಿಯಾಗಿದೆ. ಜೆಜೆಎಂ ಪ್ರಾರಂಭವೇ ಮಾಡಿಲ್ಲ. ಜೀವಜಲಕ್ಕಾಗಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡುತ್ತೇವೆ. ಆಡಳಿತವಿಲ್ಲದೆ ಅಧಿಕಾರಿಗಳು ಆಡಿದ್ದೇ ಆಟವಾಗಿದೆ.
ಹಂಚಿನಾಳ ಗ್ರಾಮಸ್ಥರು

ಕೋಟ್===

ಶಾವಂತಗೇರಾ ರೈತ ನೀರು ಬಿಡಲು ಒಪ್ಪಿದ್ದಾರೆ. ಗ್ರಾಮಸ್ಥರೇ ತಕರಾರು ಮಾಡುತ್ತಿದ್ದಾರೆ. ಗ್ರಾಮದಲ್ಲಿ ೨ದಿನಗಳ ಕೆಳಗೆ ೨೦೦ಫೀಟ್ ಬೋರ್‌ವೆಲ್ ಕೊರೆದಿದ್ದೇವೆ. ಒಂದೇ ಇಂಚು ನೀರುಬಂದಿದೆ. ಇನ್ನೊಂದು ಬೋರ್‌ಕೊರೆಯುತ್ತೇವೆ. ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ. ಜೆಜೆಎಂ ಸಮರ್ಪಕ ಜಾರಿಮಾಡಿ ಶಾಸ್ವತ ನೀರು ಕಲ್ಪಿಸುತ್ತೇವೆ.
-ಪಂಪಾಪತಿ ಹಿರೇಮಠ
ತಾಪಂ ಇಒ, ಗ್ರಾಪಂ ಆಡಳಿತಾಧಿಕಾರಿ.