೧೭೫ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ

ಹೈದರಾಬಾದ್,ಏ.೧೫- ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಿರ್ಮಿಸಿರುವ ಭಾರತದಲ್ಲೇ ೧೭೫ ಅಡಿ ಅತಿ ಎತ್ತರದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅನಾವರಣಗೊಳಿಸಿದರು. ಸಂವಿಧಾನ ಶಿಲ್ಪಿಯೆಂದೇ ಜನಜನಿತವಾದ ಅಂಬೇಡ್ಕರ್ ಅವರ ೧೨೩ನೇ ದಿನಾಚರಣೆಯ ದಿನದಂದೇ ಪ್ರತಿಮೆಯನ್ನು ಅನಾವರಣಗೊಳಿಸಿದ್ದು ವಿಶೇಷ.
ಹೈದ್ರಾಬಾದ್ ನ ಹುಸೇನ್ ಸಾಗರ್ ಬಳಿಯಿರುವ, ತೆಲಂಗಾಣ ಸರ್ಕಾರದ ಶಕ್ತಿಸೌಧದ ಪಕ್ಕದಲ್ಲೇ ಈ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಸುಮಾರು ೧೧ ಎಕರೆ ಜಾಗದಲ್ಲಿ, ೧೭೫ ಅಡಿ ಎತ್ತರವಿರುವ ಈ ಪ್ರತಿಮೆಯನ್ನು ೧೪೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯ ಅನಾವರಣ ಸಮಾರಂಭಕ್ಕೆ ತೆಲಂಗಾಣದ ಎಲ್ಲಾ ೧೧೯ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ೩೫ ಸಾವಿರ ದಲಿತ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಮೂರ್ತಿಯ ರೂಪುರೇಷೆಗಳ ರೂವಾರಿಯಾದ, ಹಿರಿಯ ಶಿಲ್ಪಿ, ಪದ್ಮಭೂಷಣ ಪುರಸ್ಕತರೂ ಆದ ನೊಯ್ಡಾ ಮೂಲದ ರಾಮ್ ವಾಂಜಿ ಸುತಾರ್ (೯೮ ವರ್ಷ) ಅವರನ್ನೂ ಸಭೆಗೆ ಆಹ್ವಾನಿಸಲಾಗಿತ್ತು. ಈ ಪ್ರತಿಮೆಯ ವಿಶೇಷತೆಗಳನ್ನು ನೀವು ಇಲ್ಲಿ ತಿಳಿಯಲೇಬೇಕಾಗುತ್ತದೆ.
ಈ ಪ್ರತಿಮೆಯ ಬಗ್ಗೆ ನೀವು ತಿಳಿಯಲೇಬೇಕಾದ ೫ ವಿಚಾರಗಳು ಇಲ್ಲಿವೆ:
ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಾಣ ಮಾಡಲು ಕೆ.ಸಿ. ಚಂದ್ರಶೇಖರ್ ಅವರು ನಿರ್ಧರಿಸಿದ ನಂತರವೂ, ಆ ಪ್ರತಿಮೆ ಹೇಗಿರಬೇಕು, ಅದಕ್ಕಾಗುವ ಖರ್ಚನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳಿಗೆ ಅಂತಿಮ ಸ್ಪರ್ಶ ಕೊಡಲು ಎರಡು ವರ್ಷಗಳೇ ಬೇಕಾಯಿತು! ಈ ಪ್ರತಿಮೆಯು ೧೭೫ ಅಡಿ ಎತ್ತರವಿದೆ. ಅಂಬೇಡ್ಕರ್ ಅವರ ಪ್ರತಿಮೆ ನಿಂತಿರುವ ವೃತ್ತಾಕಾರದ ವೇದಿಕೆಯೇ ೫೦ ಅಡಿಗಳಷ್ಟು ಎತ್ತರವಿದೆ.
ಈ ವೃತ್ತಾಕಾರದ ಬೇಸ್ ಅನ್ನು ದೇಶದ ಸಂಸತ್ತಿನ ಕಟ್ಟಡದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರತಿಮೆಯು ನಿಂತಿರು ವೇದಿಕೆಯು, ೨೬,೨೫೮ ಚದುರಡಿ ವಿಸ್ತೀರ್ಣದ್ದಾಗಿದ್ದು, ಅದರಲ್ಲಿ ಮೂರು ಅಂತಸ್ತಿನ ಕಟ್ಟಡವಿದೆ. ಅದರಲ್ಲಿ, ಅಂಬೇಡ್ಕರ್ ಜೀವನ ಚರಿತ್ರೆಯನ್ನು ಬಿಂಬಿಸುವ ಕಲಾಕೃತಿಗಳು, ಪುಸ್ತಕ ಭಂಡಾರವಿದ್ದು, ೧೦೦ ಸೀಟುಗಳ ಆಡಿಟೋರಿಯಂ ಇದೆ. ಕಟ್ಟಡದಲ್ಲಿ ಎರಡು ಲಿಫ್ಟ್ ಗಳಿದ್ದು, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಲಿಫ್ಟ್ ಮೂಲಕ ಹೋಗಲು ಅನುಕೂಲವಿದೆ.
ಈ ದೈತ್ಯ ಪ್ರತಿಮೆಯು ೪೭೪ ಟನ್ ಗಳಷ್ಟು ತೂಕ ಹೊಂದಿದೆ. ಅಂದರೆ, ೪.೭೪ ಲಕ್ಷ ಕೆಜಿ ತೂಕದ್ದು. ಈ ಪ್ರತಿಮೆಯ ನಿರ್ಮಾಣಕ್ಕೆ ೩೬೦ ಟನ್ ಸ್ಟೇಯ್ನ್ ಲೆಸ್ ಸ್ಟೀಲ್ ಬಳಸಲಾಗಿದೆ. ಜೊತೆಗೆ, ೧೧೪ ಟನ್ ಗಳಷ್ಟು ಕಂಚನ್ನು ಬಳಸಲಾಗಿದೆ.ಈ ಪ್ರತಿಮೆಯ ನಿರ್ಮಾಣಕ್ಕೆ ೧೪೬.೫೦ ಕೋಟಿ ರೂ. ವೆಚ್ಛವಾಗಿದೆ.
೫.ಪ್ರತಿಮೆಗಾಗಿ ೧೧ ಎಕರೆ ಪ್ರದೇಶವನ್ನು ಮೀಸಲಿಡಲಾಗಿದ್ದು, ಅದರ ಸುತ್ತಲೂ ಹೂದೋಟವನ್ನು ನಿರ್ಮಿಸಲಾಗಿದೆ. ಈ ಹೂದೋಟಕ್ಕಾಗಿ ೨.೯೩ ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಪ್ರತಿಮೆಯನ್ನು ನೋಡಲು ಬರುವವರಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅದರಲ್ಲಿ ೪೫೦ ಕಾರುಗಳನ್ನು ನಿಲ್ಲಿಸಬಹುದಾಗಿದೆ.