೧೬ರ ಬಾಲಕಿ ಕೈ ಹಿಡಿದ ವ್ಯಕ್ತಿ ವಿರುದ್ಧ ದೂರು

ಚಿತ್ತೂರು.ನ೧೪: ೧೬ ವರ್ಷದ ಬಾಲಕಿಯನ್ನು ೩೪ ವರ್ಷದ ವ್ಯಕ್ತಿ ಜೊತೆ ತಂದೆ-ತಾಯಿಯೇ ಗುಟ್ಟಾಗಿ ಬಾಲ್ಯ ವಿವಾಹ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆಯ ಪಾಠಕುಂಟ ಗ್ರಾಮದ ವೇದುರುಕುಪ್ಪಂ ಮಂಡಲದಲ್ಲಿ ಈ ಘಟನೆ ಜರುಗಿದೆ.
ತಮ್ಮ ೧೬ ವರ್ಷದ ಮಗಳನ್ನು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ರಾಜಶೇಖರ್ ರೆಡ್ಡಿ ಎಂಬ ೩೪ ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಸ್ಥಳೀಯರು ಐಸಿಡಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳುವ ವೇಳೆಗೆ ಬಾಲಕಿಯ ಅತ್ತೆ ಮಹಾನ್ ನಾಟಕವನ್ನೇ ಆಡಿದ್ದಾಳೆ.ಅಧಿಕಾರಿಗಳು ಸ್ಥಳಕ್ಕೆ ಬರುವ ಮುನ್ನ ಆಕೆಯ ಕತ್ತಿನಲ್ಲಿದ್ದ ಮಂಗಳಸೂತ್ರವನ್ನು ಬಾಲಕಿಯ ಅತ್ತೆ ತೆಗೆದಿದ್ದಾಳೆ.
ಅಧಿಕಾರಿಗಳಿಗೆ ಇಲ್ಲಿ ಯಾವುದೇ ಮದುವೆ ನಡೆದಿಲ್ಲ ಎಂದು ಬಿಂಬಿಸಿದ್ದಾರೆ.ಬಾಲಕಿ ಗುರುವಾರ ಎಸ್‌ಐ ಲೋಕೇಶ್ ರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ನನ್ನ ಪೋಷಕರು ೩೪ ವರ್ಷದ ವ್ಯಕ್ತಿಯ ಜೊತೆ ರಹಸ್ಯ ಮತ್ತು ಬಲವಂತವಾಗಿ ವಿವಾಹ ಮಾಡಿಸಿದ್ದಾರೆ. ತಾಳಿಯನ್ನು ತೆಗೆಸಿ ಘಟನೆಯನ್ನು ಮುಚ್ಚಿಡಲು ಪ್ರಯತ್ನ ನಡೆದಿದೆ. ಈ ಕುರಿತು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ
ಘಟನೆ ಕುರಿತು ಶೀಕಾಳಹಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.