
ನವದೆಹಲಿ, ಜು,೧೬ – ಉತ್ತರ ಪ್ರದೇಶದಲ್ಲಿ ಸರಿಸುಮಾರು ೧೫ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಇಂದು ಸಮರ್ಪಿಸಲಿದ್ದಾರೆ.
ಈ ಕ್ಷಣಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ, ಮತ್ತಿತರರು ಸಾಕ್ಷಿಯಾಗಲಿದ್ದಾರೆ.
ಸುಮಾರು ೧೪,೮೫೦ ಕೋಟಿ ರೂಪಾಯಿ ವೆಚ್ಚದಲ್ಲಿ ೨೯೬ ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದ್ದು ಎಕ್ಸ್ಪ್ರೆಸ್ವೇ ಸಂಪರ್ಕ ಮತ್ತು ಕೈಗಾರಿಕೆಗೆ ಪ್ರಮುಖ ಉತ್ತೇಜನ ನೀಡಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಪರ್ಕ ಮತ್ತು ಮೂಲಸೌಕರ್ಯಗಳ ಮೇಲೆ ಹೆಚ್ಚು ಗಮನಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ಸಾರಿಗೆ ಸಚಿವಾಲಯಕ್ಕೆ ಬಜೆಟ್ನಲ್ಲಿ ೧.೯೯ ಲಕ್ಷ ಕೋಟಿ ರೂ ಮತ್ತು ೨೦೨೨-೨೩ರ ಬಜೆಟ್ನಲ್ಲಿ ಹೆದ್ದಾರಿಗೆ ಮೀಸಲಿರಿಸಿದ್ದು, ಇದುವರೆಗೆ ಶೇ ೫೫೦ಕ್ಕೂ ಹೆಚ್ಚಿನ ಅನುದಾನ ಇದಾಗಿದೆ.
ಕಳೆದ ಏಳು ವರ್ಷಗಳಲ್ಲಿ, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ ೯೧,೨೮೭ ಕಿ.ಮೀ.ಗಳಿಂದ ಸುಮಾರು ೧,೪೧,೦೦೦ ಕಿ.ಮೀ.ಗೆ ಹೆಚ್ಚಾಗಿದ್ದು ಶೇ. ೫೦ ಕ್ಕಿಂತ ಹೆಚ್ಚಿದೆ.
೨೦೨೦ರ ಫೆಬ್ರವರಿ ೨೯ ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಎಕ್ಸ್ಪ್ರೆಸ್ವೇಯ ಕೆಲಸವನ್ನು ೨೮ ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ.
ಉತ್ತರ ಪ್ರದೇಶ ಎಕ್ಸ್ಪ್ರೆಸ್ವೇಸ್ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ ಯುಪಿಇಐಡಿಎ ಅಡಿಯಲ್ಲಿ ಸುಮಾರು ೧೪.೮೫೦ ಕೋಟಿ ರೂ. ವೆಚ್ಚದಲ್ಲಿ ೨೯೬ ಕಿ.ಮೀ. ನಾಲ್ಕು-ಲೇನ್ ಎಕ್ಸ್ಪ್ರೆಸ್ವೇ ನಿರ್ಮಿಸಲಾಗಿದ್ದು, ನಂತರ ಇದನ್ನು ಆರು ಲೇನ್ಗಳಿಗೆ ವಿಸ್ತರಿಸಬಹುದಾಗಿದೆ.
ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಬುಂದೇಲ್ಖಂಡ್ ಎಕ್ಸ್ಪ್ರೆಸ್ವೇ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ. ಎಕ್ಸ್ಪ್ರೆಸ್ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ರಚನೆಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ.