೧೫ ನೇ ಹಣಕಾಸು ಯೋಜನೆ : ೧೧.೭೨ ಕೋಟಿ ಕ್ರಿಯಾಯೋಜನೆಗೆ ಸರ್ವಾನುಮತದ ಅನುಮೋದನೆ

ಎಲ್ಲಾ ವಾರ್ಡ್‌ಗಳಿಗೂ ಸಮಾನ ಹಂಚಿಕೆಗೆ ತಾಕೀತು – ಕಾಲಮಿತಿಯಲ್ಲಿ ಕಾಮಗಾರಿ ಅನುಷ್ಠಾನಕ್ಕೆ ಸದಸ್ಯರ ಒತ್ತಾಯ
ರಾಯಚೂರು.ಜು.೨೬- ನಗರದ ೩೫ ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ಹಂಚಿಕೆಯ ಸಲಹೆ ಮತ್ತು ತಾರತಮ್ಯಕ್ಕೆ ಅವಕಾಶ ನೀಡದಂತೆ ಎಚ್ಚರಿಕೆಯೊಂದಿಗೆ ೧೫ ನೇ ಹಣಕಾಸಿನ ೧೧.೭೨ ಕೋಟಿ ರೂ. ಕ್ರಿಯಾಯೋಜನೆಗೆ ಸರ್ವಾನುಮತದ ಅನುಮೋದನೆ ನೀಡಲಾಯಿತು.
ಇಂದು ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಗೆ ಕಾಂಗ್ರೆಸ್, ಬಿಜೆಪಿ, ಜಾದಳ ಮತ್ತು ಪಕ್ಷೇತರ ೧೩ ಸದಸ್ಯರ ಗೈರು ಹಾಜರಿ ಮಧ್ಯೆ ಸಭೆ ನಡೆಸಲಾಯಿತು. ಸಭೆಯಲ್ಲಿ ಆಯುಕ್ತ ಕೆ.ಗುರುಲಿಂಗಪ್ಪ ಅವರು ೧೫ ನೇ ಹಣಕಾಸು ಯೋಜನೆಯ ಯಾಯೋಜನೆಯನ್ನು ಮಂಡಿಸಿ, ಅನುಮೋದನೆಗೆ ಕೋರಿದರು. ೧೫ ನೇ ಹಣಕಾಸು ಯೋಜನೆ ಮಂಡನೆ ಪೂರ್ವ ಆಯುಕ್ತರು ೧೧.೭೨ ಕೋಟಿ ಅನುದಾನ ವಿಭಜನೆಯ ಬಗ್ಗೆ ಮಾಹಿತಿ ನೀಡಿದರು.
೧೫ ನೇ ಹಣಕಾಸು ಯೋಜನೆಯಲ್ಲಿ ಎರಡು ಹಂತಗಳಲ್ಲಿ ಅನುದಾನ ವಿಭಜಿಸಲಾಗುತ್ತದೆ. ಮೂಲ ಅನುದಾನ ಶೇ.೪೦ ರಷ್ಟು, ನಿರ್ಬಂಧಿತ ಅನುದಾನ ಶೇ.೬೦ ರಷ್ಟು ವಿಂಗಡಿಸಲಾಗುತ್ತದೆ. ಮೂಲ ಅನುದಾನದ ಬಾಬತ್ತು ೪.೬೨ ಕೋಟಿ, ನಿರ್ಬಂಧಿತ ಅನುದಾನ ಬಾಬತ್ತು ೭.೦೮ ಕೋಟಿ ಅಡಿ ಸರ್ಕಾರಗಳ ನಿಯಮಗಳನ್ವಯ ಅನುದಾನ ಬಳಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ನಗರದ ಒಳ ಚರಂಡಿಗಳಿಗೆ ೯೩ ಲಕ್ಷ ಮಳೆ ನೀರು ಚರಂಡಿಗಳಿಗೆ ೯೩ ಲಕ್ಷ, ರಸ್ತೆ, ಪಾದಚಾರಿಗೆ ೯೩ ಲಕ್ಷ ಉದ್ಯಾನವನ ಅಭಿವೃದ್ಧಿಗೆ ೯೩ ಲಕ್ಷ, ಬೀದಿ ದೀಪ ನಿರ್ವಹಣೆಗೆ ೫೦ ಲಕ್ಷ, ಯುಜಿಡಿ ನಿರ್ಮಾಣಕ್ಕೆ ೨೩.೨೩ ಲಕ್ಷ, ಕುಡಿವ ನೀರು ನಿರ್ವಹಣೆಗೆ ೩.೫೧ ಕೋಟಿ. ಘನತ್ಯಾಜ್ಯ ವಿಲೇವಾರಿಗೆ ೩.೫೧ ಕೋಟಿ ನಿಗದಿಗೊಳಿಸಲಾಗಿದೆ.
ರಾಂಪೂರು ಜಲಾಶಯ ಶುದ್ಧ ಕುಡಿವ ನೀರು ಘಟಕ ೫೦ ಲಕ್ಷ, ಚಿಕ್ಕಸೂಗೂರು ಶುದ್ಧ ಕುಡಿವ ನೀರು ಘಟಕ ನಿರ್ವಹಣೆಗೆ ಅನುದಾನ ಒದಗಿಸಲಾಗಿದೆಂದು ಆಯುಕ್ತರು ಸಭೆಯ ಮುಂದೆ ವಿವರಣೆ ಮಂಡಿಸಿದರು. ಒಟ್ಟಾರೆಯಾಗಿ ಪ್ರತಿ ವಾರ್ಡ್‌ಗೆ ೧೩ ಲಕ್ಷ ಅನುದಾನ ೧೫ ನೇ ಹಣಕಾಸು ಯೋಜನೆಯಡಿ ದೊರೆಯಲಿದೆಂಬ ಪ್ರಸ್ತಾಪ ಮಂಡಿಸಲಾಯಿತು. ಈ ಕ್ರಿಯಾಯೋಜನೆಗೆ ಅನುಮೋದನೆ ನೀಡುವಂತೆ ಕೋರಿದರು. ತುರ್ತು ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರು ಅನುದಾನ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯ ಆಗಬಾರದು ಮತ್ತು ಎಲ್ಲರಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳೊಂದಿಗೆ ಸರ್ವಾನುಮತದ ಅನುಮೋದನೆ ನೀಡಲಾಯತು.
ಸಭೆಯಲ್ಲಿ ಮಾತನಾಡಿದ ದರೂರು ಬಸವರಾಜ ಮತ್ತು ಎನ್.ಕೆ.ನಾಗರಾಜ ಅವರು ಆಯುಕ್ತರ ಮೇಲೆ ತೀವ್ರ ಆಕ್ರೋಶಗೊಂಡರು. ಕ್ರಿಯಾಯೋಜನೆ ರೂಪಿಸುವಾಗ ಸದಸ್ಯರಿಗೆ ಈ ಬಗ್ಗೆ ಏಕೆ ಮಾಹಿತಿ ನೀಡಲಿಲ್ಲ. ಒಂದು ವಾರದ ಮುಂಚೆ ನಮ್ಮಿಂದ ಲೇಟರ್ ಹೆಡ್ ಪಡೆದುಕೊಳ್ಳುವ ಉದ್ದೇಶವೇನು?. ಯುಜಿಡಿ, ಗಾರ್ಡನ್ ಹೀಗೆ ವಿವಿದ ಬಾಬತ್ತುಗಳಲ್ಲಿ ಅನುದಾನ ಹಂಚಿಕೆಯ ಬಗ್ಗೆ ನಮಗೆ ಮಾಹಿತಿ ಇಲ್ಲದಿರುವುದರಿಂದ ನಮ್ಮ ವಾರ್ಡ್ ಸಮಸ್ಯೆಗಳಿಗೆ ನಾವು ಅನುದಾನ ಪಡೆಯಲು ತೊಂದರೆಗೆ ನಗರಸಭೆಯೆ ಕಾರಣವೆಂದು ಆರೋಪಿಸಿದರು.
ನಾಗರಾಜ ತೀವ್ರ ಆಕ್ರೋಶದೊಂದಿಗೆ ಯಾವ ವಾರ್ಡ್‌ಗಳಲ್ಲಿ ಯಾವ ಕಾಮಗಾರಿ ನೈಜ್ಯತೆ ಬಗ್ಗೆ ನಗರಸಭೆ ಅಧಿಕಾರಿಗಳು ಪರಿಶೀಲಿಸಿದ್ದಾರೆಯೆ?, ಯಾವ ಆಧಾರದ ಮೇಲೆ ಕ್ರಿಯಾಯೋಜನೆ ರೂಪಿಸಲಾಗಿದೆಂದು ಹೇರು ಧ್ವನಿಯಲ್ಲಿ ಪ್ರಶ್ನಿಸಿದರು. ಶ್ರೀನಿವಾಸ ರೆಡ್ಡಿ ಅವರು ಮಾತನಾಡಿ, ಸದಸ್ಯರು ಕೇಳಿದ್ದನ್ನು ಅವರಿಗೆ ನೀಡುವಂತೆ ಆಗ್ರಹಿಸಿದರು. ಜಯಣ್ಣ ಅವರು ಮಧ್ಯ ಪ್ರವೇಶಿಸಿ ಎಸ್‌ಎಫ್‌ಸಿ ಅನುದಾನ ಕ್ರಿಯಾಯೋಜನೆ ಸಂದರ್ಭದಲ್ಲಿ ನೆಲದ ನೈಜ್ಯತೆ ಅರ್ಥಮಾಡಿಕೊಂಡು ಸದಸ್ಯರು ಕೇಳುವ ಪ್ರಶ್ನೆ ಸರಿಯಾಗಿದೆ. ಆದರೆ, ೧೪ ಮತ್ತು ೧೫ ನೇ ಅನುದಾನ ಅಡಿಯಲ್ಲಿ ಕ್ರಿಯಾಯೋಜನೆ ನಿಯಮಾನುಸಾರ ರೂಪಿಸಬೇಕು.
ನಿಯಮಗಳನ್ನು ಬಿಟ್ಟು ಅನುದಾನ ಹಂಚಿಕೆ ಮಾಡುವುದರಿಂದ ಕ್ರಿಯಾಯೋಜನೆ ತಿರಸ್ಕಾರಗೊಳ್ಳುವ ಅಪಾಯವೂ ಇದೆ ಎಂದು ಸಭೆಗೆ ತಿಳಿಸಿದರು. ಕ್ರಿಯಾಯೋಜನೆಯಲ್ಲಿ ಏನಾದರೂ ನ್ಯೂನ್ಯತೆಗಳಿದ್ದರೆ ಈಗಲೂ ಅದನ್ನು ಸರಿಪಡಿಸಿಕೊಳ್ಳುವ ಅವಕಾಶವಿದೆ ಎಂದರು. ಶ್ರೀನಿವಾಸ ರೆಡ್ಡಿ ಸೇರಿದಂತೆ ನಾಗರಾಜ ಹಾಗೂ ಎಲ್ಲಾ ಸದಸ್ಯರು ಪ್ರತಿ ವಾರ್ಡ್‌ಗೆ ೧೩ ಲಕ್ಷ ಸಮಾನವಾಗಿ ಹಂಚಿಕೆಯಾಗುವಂತೆ ಗಮನ ಹರಿಸಲು ಸೂಚಿಸಿದರು. ಸಭೆಯಲ್ಲಿ ಮೌನವಾಗಿ ಕುಳಿತಿದ್ದ ಈ.ಶಶಿರಾಜ ಅವರನ್ನುದ್ದೇಶಿಸಿ ಮಾತನಾಡಿದ ಜಯಣ್ಣ ಅವರು, ಶಶಿರಾಜ ಅವರೆ ನಮಗೆ ಮಾತ್ರ ಸಂಬಂಧವಿದೆಯೆ? ನೀವು ಅಭಿಪ್ರಾಯ ಹೇಳುವಂತೆ ಕೇಳಿದ ನಂತರ ಶಶಿರಾಜ ಅವರು ಸಭೆಯಲ್ಲಿ ಎದ್ದು ಅಧ್ಯಕ್ಷ, ಉಪಾಧ್ಯಕ್ಷರನ್ನು ಹೊರತು ಪಡಿಸಿ, ಎಲ್ಲಾ ೩೩ ಸದಸ್ಯರಿಗೆ ಅನುದಾನ ಸಮಾನವಾಗಿ ಹಂಚಿಕೆ ಮಾಡುವಂತೆ ಕೇಳಿದರು.
ಈ.ವಿನಯಕುಮಾರ ಅವರು ಮಾತನಾಡುತ್ತಾ, ೧೧.೭೨ ಕೋಟಿ ಕ್ರಿಯಾಯೋಜನೆ ತುರ್ತು ಸಭೆ ಒಂದೆ ದಿನದಲ್ಲಿ ತೀರ್ಮಾನಿಸಲಾಗುತ್ತದೆ. ದೂರವಾಣಿ ಮೂಲಕ ಮಾಹಿತಿ ನೀಡುತ್ತಾರೆ. ಒಂದು ದಿನ ಮುಂಚೆ ನೋಟೀಸ್ ಬರುತ್ತದೆ. ಈ ರೀತಿಯಲ್ಲಿ ಸಭೆಗಳನ್ನು ನಿರ್ವಹಿಸುವುದು ಸರಿಯಲ್ಲ. ಕ್ರಿಯಾಯೋಜನೆ ಮಾಡಿದ ನಂತರ ಅದರ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಏಪ್ರೀಲ್ ೩೦ ರಂದು ನಡೆದ ಸಭೆ ನಡಾವಳಿ ಇನ್ನೂವರೆಗೂ ನೀಡಿಲ್ಲ. ನಡಾವಳಿಗೆ ಅನುಮೋದನೆ ಇಲ್ಲದೆ ನಗರಸಭೆ ಆಡಳಿತ ಯಾವ ರೀತಿ ನಡೆಯುತ್ತದೆ ಎನ್ನುವುದೆ ಅಚ್ಚರಿ ಮೂಡಿಸುತ್ತದೆ. ನಗರಸಭೆಯಲ್ಲಿ ಮ್ಯೂಟೇಷನ್, ಖಾತೆ ನೀಡದೆ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ನಗರಸಭೆಯ ಕಾಮಗಾರಿಗಳಿಗೆ ಕಡಿಮೆ ಮೊತ್ತದ ಟೆಂಡರ್ ದಾಖಲಿಸಿ, ಎರಡು, ಮೂರು ವರ್ಷಗಳವರೆಗೂ ಕಾಮಗಾರಿ ನಡೆಸದಿರುವ ನ್ಯೂನ್ಯತೆ ಬಗ್ಗೆ ಶ್ರೀನಿವಾಸ ರೆಡ್ಡಿ ಸಭೆಯ ಗಮನಕ್ಕೆ ತಂದರು. ಕಡಿಮೆ ಟೆಂಡರ್‌ದಾರರು ನಮೂದಿಸುವ ಗುತ್ತೇದಾರರಿಂದ ಅಷ್ಟು ಮೊತ್ತದ ಹಣವನ್ನು ತುಂಬಿಸಿಕೊಂಡ ನಂತರವೆ ಟೆಂಡರ್ ಅಂತಿಮಗೊಳಿಸುವಂತೆ ಸೂಚಿಸಲಾಯಿತು. ಇಲ್ಲವಾದರೆ, ಎಇಇ ಮತ್ತು ಜೆಇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಮೇಶ ಅವರು ಮಾತನಾಡುತ್ತಾ, ಕಲುಷಿತ ನೀರಿನಿಂದ ಸಮಸ್ಯೆಗೆ ಗುರಿಯಾದ ಜನರಿಗೆ ಶೀಘ್ರವೇ ಪರಿಹಾರ ಒದಗಿಸಬೇಕು. ಚಿಕಿತ್ಸೆಗಾಗಿ ೨೦ ಸಾವಿರ ಪರಿಹಾರ ನೀಡುವ ನಿರ್ಧಾರವನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.
ವೇದಿಕೆ ಮೇಲೆ ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಅವರು ಉಪಸ್ಥಿತರಿದ್ದರು.