೧೫ ದಿನಗಳಲ್ಲಿ ರೆಮ್‌ಡೆಸಿವಿರ್ ದಾಸ್ತಾನು ಹೆಚ್ಚಳ, ಸಿಎಂಗೆ ವೈದ್ಯರ ಸ್ಪಷ್ಟನೆ

ಬೆಂಗಳೂರು.ಏ೨೨:ರಾಜ್ಯದಲ್ಲಿ ರೆಮ್‌ಡೆಸಿವಿರ್ ಇಂಜಕ್ಷನ್‌ನ ದಾಸ್ತಾನು ಕೊರತೆ ಇಲ್ಲ. ಇನ್ನು ೧೫ ದಿನಗಳಲ್ಲಿ ರೆಮ್‌ಡೆಸಿವಿರ್ ಇಂಜಕ್ಷನ್ ದಾಸ್ತಾನು ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಅಷ್ಟೇ ಅಲ್ಲ ! ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ ಹಲವು ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು ಈ ನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ಇಲ್ಲಿ ಭರವಸೆ ನೀಡಿದರು.
ಕೋವಿಡ್-೧೯ ರ ಸೋಂಕು ದೃಢಪಟ್ಟು ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿಯವರು ಕಳೆದರಾತ್ರಿ ಆಸ್ಪತ್ರೆಯಿಂದ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಡನೆ ವೀಡಿಯೋ ಸಂವಾದ ನಡೆಸಿ, ವೈದ್ಯ ವೃಂದ ರಾಜ್ಯದ ಜನತೆಗೆ, ಅದರಲ್ಲೂ ವಿಶೇಷವಾಗಿ ಬಡಜನತೆಗೆ, ಸಂಕಷ್ಟದ ಈ ಕಾಲದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಅತ್ಯಂತ ಪ್ರೀತಿಯಿಂದ ಒದಗಿಸಿ ವೃತ್ತಿಧರ್ಮದ ಕೀರ್ತಿ-ಗೌರವಗಳನ್ನು ಕಾಪಾಡಬೇಕು ಎಂದು ಕಳಕಳಿಯ ಮನವಿ ಮಾಡಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೂ ಈ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ೭೫೦ ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ ೬೬ ಹಾಸಿಗೆಗಳಿಗೆ ವೆಂಟಿಲೇಟರ್ ಸೌಲಭ್ಯ ಇದೆ ಹಾಗೂ ಕ್ರಿಟಿಕಲ್ ಕೇರ್ ಯೂನಿಟ್‌ನಲ್ಲಿ ೫೦ ಹಾಸಿಗೆಗಳ ಸೌಲಭ್ಯವಿದೆ. ಟ್ರಾಮಾಕೇರ್ ಬ್ಲಾಕ್‌ನಲ್ಲಿ ೩೦೦ ಹಾಸಿಗೆಗಳು ಇದ್ದು, ಐ.ಸಿ.ಯು ಮತ್ತು ಕ್ರಿಟಿಕಲ್ ಕೇರ್ ಯೂನಿಟ್ ಹಾಸಿಗೆಗಳೆಲ್ಲ್ಲವೂ ಭರ್ತಿಯಾಗಿವೆ. ಇಂದಿನಿಂದ ಟವರ್ ಬ್ಲಾಕ್‌ನಲ್ಲಿ ಇರುವ ಹಾಸಿಗೆಗಳನ್ನೂ ಹಂಚಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥರೂ ಆಗಿರುವ ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕರಾದ ಡಾ: ಜಯಂತಿ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
ಮೊದಲ ಅಲೆಗೂ ಪ್ರಸ್ತುತದ ಎರಡನೇ ಅಲೆಗೂ ಹಾಸಿಗೆಗಳ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷದ ಜೂನ್, ಜುಲೈ ತಿಂಗಳಿನಂತೆಯೇ ಈ ವರ್ಷ ಕೂಡಾ ಕೋವಿಡ್-೧೯ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಾಣಿಸುತ್ತಿದೆ. ಒಂದು ದಿನಕ್ಕೆ ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲಿಯೇ ಸರಾಸರಿ ೫೦ ಕೋವಿಡ್ ಸೋಂಕಿತರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಆಮ್ಲಜನಕದ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇಬಆತಂಕ ಬೇಡ. ಇನ್ನು ೧೫ ದಿನಗಳಲ್ಲಿ ರೆಮ್‌ಡೆಸಿವಿರ್ ಇಂಜಕ್ಷನ್ ಕೂಡಾ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲು ಕ್ರಮ ವಹಿಸಲಾಗಿದೆ. ಸಧ್ಯಕ್ಕೆ ಈ ಔಷಧಿಯ ಕೊರತೆ ಇಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅದೇ ಆಸ್ಪತ್ರೆಯ ಡಾ: ಶಶಿಭೂಷಣ್ ಅವರು ಪ್ರತಿಯೊಬ್ಬರೂ ಸಕಾಲದಲ್ಲಿ ಔಷಧಿ ಪಡೆದಲ್ಲಿ ಭವಿಷ್ಯದ ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದರು.
ನಗರದ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಸೆಂಟರ್‍ನ ತಜ್ಞ ಡಾ: ಮನೋಜ್ ಅವರು ತಮ್ಮ ವ್ಯಾಪ್ತಿಯ ಬೌರಿಂಗ್ ಆಸ್ಪತ್ರೆ, ಚರಕ ಆಸ್ಪತ್ರೆ ಹಾಗೂ ಘೋಷಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತಸೆಗಾಗಿ ಒಟ್ಟು ೧೬೦ ಹಾಸಿಗೆಗಳು ಲಭ್ಯವಿದೆ. ಎಲ್ಲಾ ಹಾಸಿಗೆಗಳೂ ಭರ್ತಿಯಾಗಿವೆ. ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ಕಾರಣ ಹೆಚ್ಚಿನ ಸೌಲಭ್ಯಗಳನ್ನು ವಿಸ್ತರಿಸಿ ಈಗಾಗಲೇ ೨೦೫ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚಿಗೆ ಪ್ರಾರಂಭಿಸಲಾಗಿರುವ ಚರಕ ಆಸ್ಪತ್ರೆಯಲ್ಲಿ ಪ್ರಾರಂಭದಲ್ಲಿ ೫೦ ಹಾಸಿಗಗಳನ್ನು ಕೋವಿಡ್‌ಗಾಗಿ ಮೀಸಲಿರಿಸಲಾಗಿದ್ದು, ಅದರಲ್ಲಿ ಎಲ್ಲಾ ಹಾಸಿಗೆಗಳು ಭರ್ತಿಯಾಗಿರುತ್ತವೆ. ಹೆಚ್ಚಿನ ಸೌಲಭ್ಯ ಒದಗಿಸುವ ಮೂಲಕ ಪ್ರಸ್ತುತ ೬೩ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗೋಷ್ ಆಸ್ಪತ್ರೆ ಹೆರಿಗೆ ಆಸ್ಪತ್ರೆಯಾಗಿದ್ದು, ಪ್ರಸ್ತುತ ೫೬ ಗರ್ಭಿಣಿ ಕೋವಿಡ್ ಸೋಂಕಿತರಲ್ಲಿ ೪೩ ಗರ್ಭಿಣಿಯರಿಗೆ ಸುಗಮವಾಗಿ ಹೆರಿಗೆ ಮಾಡಿಸಲಾಗಿದೆ. ಉಳಿದವರೂ ಕೂಡಾ ಆರೋಗ್ಯವಾಗಿದ್ದಾರೆ ಎಂದರು.