೧೫ ಕೋಟಿ ಅನುದಾನ ಸದುಪಯೋಗ ಪಡಿಸಿಕೊಳ್ಳಲಾಗಿದೆ

ರಾಯಚೂರು,ಜ.೨೦- ಸರಕಾರ ನೀಡಿದ ೧೫ ಕೋಟಿ ರೂ. ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ಅವರಿಂದು ನಗರದ ರಾಯಚೂರು ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ವಿಜ್ಞಾನ ವಿಭಾಗದ ತರಗತಿ ಕೊಠಡಿಗಳು ನಿರ್ಮಾಣಕ್ಕೆ ೪.೭೫ ಕೋಟಿ, ವಿಜ್ಞಾನ ಪ್ರಯೋಗಾಲಯಕ್ಕೆ ೫೪ ಲಕ್ಷ ರೂ. ಮಾಡ್ಯುಲರ್ ವಿಜ್ಞಾನ ಪ್ರಯೋಗಾಲಯಕ್ಕೆ ೨೯೨.೫೦ ಲಕ್ಷ ರೂ. ವಿಜ್ಞಾನ ಪ್ರಯೋಗಾಲಯದ ಪ್ರಯೋಗಾತ್ಮಕ ಉಪಕರಣಗಳ ಖರೀದಿಗೆ ೧.೫ ಕೋಟಿ, ಇಂಟಿಯರ್ ಸಿವಿಲ್ ಕಾಮಗಾರಿಗೆ ೨.೫ಕೋಟಿ, ತರಗತಿ ಕೊಠಡಿಗಳ/ಸಿಬ್ಬಂದಿ ಕೊಠಡಿ/ ಕಚೇರಿಗೆ ಪಿಠೋಪಕರಣಗಳಿಗಾಗಿ ೨.೮ ಕೋಟ ರೂ. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ವಿಶ್ವವಿದ್ಯಾಲಯವು ಯುಜಿಸಿ ನಿಯಮಾನುಸಾರ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ೧೭೫ ಖಾಯಂ ಬೋಧಕ ಹುದ್ದೆಗಳ ಪೈಕಿ ೩೧ ಹುದ್ದೆಗಳನ್ನು ಮೊದಲ ಹಂತದಲ್ಲಿ ಮಂಜೂರಾತಿ ಮಾಡಲಾಗಿದೆ. ಅಂದಾಜು ೨೦೦ ಬೋಧಕೇತರ ಹುದ್ದೆಗಳಿಗೆ ನೀಡಲಾದ ಮನವಿಗೆ ೩೬ ಹುದ್ದೆಗಳನ್ನು ಮಂಜೂರು ಮಾಡಿ ಹೊರಗುತ್ತಿಗೆ ಆಧಾರದ ಮೇಲೆ ತುಂಬಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ. ಡಾ. ತಿಮ್ಮೇಗೌಡ ಕಮೀಟಿ ವರದಿಯಂತೆ ರಾಯಚೂರು ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ನಡುವೆ ಬೋಧಕೇತರ ಹುದ್ದೆಗಳ ಹಂಚಿಕೆಯ ಕಾರ್ಯ ಮುಗಿದಿದ್ದು ಅಂದಾಜು ೧೬೧ ಬೋಧಕೇತರ ಹುದ್ದೆಗಳು ರಾಯಚೂರು ವಿಶ್ವವಿದ್ಯಾಲಯಕ್ಕೆ ದೊರೆಯುವ ನಿರೀಕ್ಷೆ ಇದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಸರಕಾರದ ಆಶಯದಂತೆ ಗುಣಮಟ್ಟದ ಶಿಕ್ಷಣ ಸೇರಿದಂತೆ ಇತರೆ ವಿಶ್ವವಿದ್ಯಾಲಯದಂತೆ ಪ್ರಗತಿಯತ್ತ ರಾಯಚೂರು ವಿಶ್ವವಿದ್ಯಾಲಯ ದಾಪುಗಾಲು ಇಡುತ್ತಿದೆ. ೨೫೦ ಎಕರೆ ವಿಶಾಲ ಜಾಗೆಯಲ್ಲಿ ಸರಕಾರದ ವಾಸ್ತುಶಿಲ್ಪಿಗಳು ನೀಡಿದ ನೀಲನಕ್ಷೆಯಂತೆ ವಿಶ್ವವಿದ್ಯಾಲಯ ತಲೆ ಎತ್ತಲಿದೆ ಎಂದರು.
ಕುಲಸಚಿವ ಪ್ರೊ.ಎಂ.ವಿಶ್ವನಾಥ, ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ರ?ರಿಸ್ವಾಮಿ, ಸಿಂಡಿಕೇಟ್ ಸದಸ್ಯರಾದ ಶಿವಬಸಪ್ಪ ಮಾಲೀಪಾಟೀಲ, ಜಗದೀಶ, ಶಂಕರರೆಡ್ಡಿ, ಹಣಕಾಸು ಅಧಿಕಾರಿ ನಾಗರಾಜ್ ಅಭಿವೃದ್ಧಿ ಮಂಡಳಿಯ ಸದಸ್ಯ ಡಾ.ರಾಘವೇಂದ್ರ ಪತ್ತೇಪೂರ ಸೇರಿದಂತೆ ಇತರರು ಇದ್ದರು.