೧೫೦ ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಧ್ವಜಾರೋಹಣ

ನವದೆಹಲಿ, ಆ.೫- ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ೧೫೦ ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.

ದೇಶದಲ್ಲಿ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲಾಗುತ್ತಿರುವ ಒಟ್ಟು ೩,೬೯೩ ಪಾರಂಪರಿಕ ತಾಣಗಳಿವೆ. ಈ ಪೈಕಿ ೩೭ ವಿಭಾಗಗಳ ತಾಣಗಳಲ್ಲಿ ಇಲಾಖೆಯು ಸಂವಾದ, ಉಪನ್ಯಾಸ, ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಸ್ವಾತಂತ್ರ್ಯ ಹೋರಾಟಗಾರರು, ಪದ್ಮ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಭಾರತೀಯ ಪುರಾತತ್ವ ಸರ್ವೇಕ್ಷಣೆ ಅಡಿಯಲ್ಲಿ ಬರುವ ಎಲ್ಲಾ ಸ್ಮಾರಕಗಳು ಹಾಗೂ ಪ್ರವಾಸಿತಾಣಗಳಿಗೆ ಇಂದಿನಿಂದ ಆ. ೧೫ರವರೆಗೆ ಉಚಿತ ಪ್ರವೇಶವನ್ನು ಕೇಂದ್ರ ಸಂಸ್ಕೃತಿ ಇಲಾಖೆ ಈಗಾಗಲೇ ಘೋಷಿಸಿದೆ.

ಇನ್ನೂ, ೧೫೦ ಸಂರಕ್ಷಿತ ಸ್ಮಾರಕಗಳು ತ್ರಿವರ್ಣಗಳಿಂದ ಕಂಗೊಳಿಸುವಂತೆ ಮಾಡಲಾಗುವುದು.ದೇಶದಾದ್ಯಂತ ೭೫೦ ಸ್ಮಾರಕಗಳಲ್ಲಿ ಸ್ವಚ್ಛತಾ ಅಭಿಯಾನ ಆರಂಭಿಸಲಾಗಿದೆ ಎಂದೂ ಇಲಾಖೆ ಹೇಳಿದೆ.