೧೫ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ

ದೇವದುರ್ಗ.ಏ.೨೧-ತಾಲೂಕಿನ ಮಲದಕಲ್ ಗ್ರಾಪಂ ವ್ಯಾಪ್ತಿಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ೧೫ನೇ ಹಣಕಾಸು ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಪಂ ಇಒ ಪಂಪಾಪತಿ ಹಿರೇಮಠಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸೋಮವಾರ ಮನವಿ ಸಲ್ಲಿಸಿತು.
ಸದರಿ ಯೋಜನೆಯಡಿ ೨೦ಲಕ್ಷ ರೂ. ಅನುದಾನವನ್ನು ನಕಲಿ ದಾಖಲೆ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಜಯಶ್ರೀ ಲಕ್ಷ್ಮಿವೆಂಕಟೇಶ್ವರ ಎಲೆಟ್ರಿಕಲ್ ಹಾಗೂ ಕಮಲೇಶ ಎಲೆಟ್ರಿಕಲ್ ಮಾಲೀಕರ ಬ್ಯಾಂಕ್ ಖಾತೆಗೆ ಹಣ ಹಾಕಿ, ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಗ್ರಾಪಂ ವ್ಯಾಪ್ತಿಯಲ್ಲಿ ಈ ಅಂಗಡಿಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಖರೀದಿ ಮಾಡಿಲ್ಲ. ಪಿಡಿಒ ಸರಿಯಾಗಿ ಕೆಲಸಕ್ಕೆ ಬಾರದೆ ರಾಯಚೂರಿನಲ್ಲೇ ನೆಲೆಸಿದ್ದಾರೆ. ನಾಲ್ಕು ತಿಂಗಳು ಕಳೆದರೂ ಯಾವುದೇ ಸಭೆ ಕರೆದಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಕೂಡಲೇ ೧೫ನೇ ಹಣಕಾಸು ಯೋಜನೆಯಡಿ ಆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಎಸಗಿರುವ ಪಿಡಿಒ ವಿರುದ್ಧ ಕೇಸ್ ದಾಖಲಿಸಿ, ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ, ಮುಖಂಡರಾದ ನರಸಪ್ಪ ಎನ್.ಗಣೇಕಲ್, ರಾಜಪ್ಪ ಸಿರವಾರಕರ್, ಮರೆಪ್ಪ ಮಲದಕಲ್ ಇತರರಿದ್ದರು.