೧೫ನೇ ರಾಷ್ಟ್ರಪತಿಯಾಗಿ ಮುರ್ಮು ಪದಗ್ರಹಣ

ನವದೆಹಲಿ, ಜು. ೨೫- ಭಾರತದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೧೦.೧೪ ಗಂಟೆಗೆ ಸರಿಯಾಗಿ ನೂತನ ರಾಷ್ಟ್ರಪತಿಗಳು ಪ್ರಮಾಣ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು.ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರು ದೇಶದ ೨ನೇ ಮಹಿಳಾ ರಾಷ್ಟ್ರಪತಿಯಾಗಿದ್ದು, ಈ ಮೊದಲು ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು.ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಮೊದಲ ಬಾರಿಗೆ ದೇಶದ ಉನ್ನತ ಹುದ್ದೆ ಅಲಂಕರಿಸಿರುವುದು ಇದೇ ಪ್ರಪ್ರಥಮ.ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ಕುರ್ಚಿಯನ್ನು ಸಾಂಕೇತಿಕವಾಗಿ ಬಿಟ್ಟು ಕೊಟ್ಟರು.ಮುಖ್ಯ ದಾಖಲೆಗಳಿಗೆ ದ್ರೌಪತಿ ಮುರ್ಮು ಅವರು ಇದೇ ಸಂದರ್ಭದಲ್ಲಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಭಾರತದ ಸಂವಿಧಾನ ಮತ್ತು ಸೌರ್ವಭೌಮತೆಯ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡರು.ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ದ್ರೌಪದಿ ಮುರ್ಮು ಅವರು ಮಿಲಿಟರಿ ಬೆಂಗಾವಲಿನಲ್ಲಿ ದೆಹಲಿಯ ರಾಜಘಾಟ್‌ಗೆ ತೆರಳಿ ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.ನಂತರ ಅವರು ರಾಷ್ಟ್ರಪತಿ ಭವನದಲ್ಲಿ ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಅವರ ಪತ್ನಿ ಕವಿತಾ ಕೋವಿಂದ್ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡರು.ರಾಷ್ಟ್ರಪತಿ ಭವನದಿಂದ ಬೆಂಗಾವಲು ಅಶ್ವಪಡೆಯೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಲೋಕಸಭೆಯ ಸ್ಪೀಕರ್ ಓಂಬಿರ್ಲಾ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸ್ವಾಗತಿಸಿದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ರಾಷ್ಟ್ರಪತಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಲೋಕಸಭೆಯ ಸ್ಪೀಕರ್ ಓಂಬಿರ್ಲಾ, ಕೇಂದ್ರ ಸಚಿವ ಸಂಪುಟದ ಸಚಿವರುಗಳು, ವಿವಿಧ ರಾಜ್ಯಗಳ ರಾಜ್ಯಪಾಲರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸತ್ ಸದಸ್ಯರು, ಸೇನಾ ಮುಖ್ಯಸ್ಥರುಗಳು ಹಾಗೂ ಹಲವು ಗಣ್ಯರು ನೂತನ ರಾಷ್ಟ್ರಪತಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸೆಂಟ್ರಲ್ ಹಾಲ್‌ನಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದರು.ಜುಲೈ ೧೮ ರಂದು ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರು ತಮ್ಮ ಪ್ರತಿಸ್ಪರ್ಧಿ ಯುಪಿಎ ಅಭ್ಯರ್ಥಿ ಯಶವಂತ ಸಿನ್ಹಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ್ದರು.
ನೂತನ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಅವರನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಷ್ಟ್ರಪತಿಗಳ ತವರು ರಾಜ್ಯ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಂಸತ್ ಸದಸ್ಯರು ಹಾಗೂ ಗಣ್ಯರು ಅಭಿನಂದಿಸಿದರು.
ಜುಲೈ ೨೫ ರಂದೇ ರಾಷ್ಟ್ರಪತಿ ಪ್ರತಿಜ್ಞಾ ವಿಧಿ
೧೯೭೭ ರಿಂದ ಈವರೆಗೆ ಜುಲೈ ೨೫ ರಂದೇ ನೂತನ ರಾಷ್ಟ್ರಪತಿಗಳ ಪ್ರತಿಜ್ಞಾ ವಿಧಿ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ.
ನಿರ್ದಿಷ್ಟವಾಗಿ ಇದೇ ದಿನಾಂಕ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ನಡೆಯಬೇಕೆಂಬ ಲಿಖಿತ ನಿಯಮವೇನೂ ಇಲ್ಲ. ಆದರೆ ೧೯೭೭ ರಿಂದ ಜುಲೈ ೨೫ ರಂದೇ ನೂತನ ರಾಷ್ಟ್ರಪತಿಗಳ ಪ್ರತಿಜ್ಞಾ ವಿಧಿ ಸಂಪ್ರದಾಯ ನಡೆದುಕೊಂಡು ಬಂದಿದೆ.
ದ್ರೌಪತಿ ಮುರ್ಮು ಭಾವಚಿತ್ರ
ರಾಷ್ಟ್ರಪತಿ ಭವನದ ಸಚಿವಾಲಯ ನಿರ್ವಹಿಸುವ ಟ್ವಿಟ್ಟರ್ ಖಾತೆಯಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಹಾಕಲಾಗಿದೆ.
ಇಂದು ರಾಮನಾಥ ಕೋವಿಂದ್ ಅವರ ಭಾವಚಿತ್ರ ಟ್ವಿಟ್ಟರ್ ಖಾತೆಯಲ್ಲಿ ಇತ್ತು.

ಬಡವರಿಗೆ ಸಿಕ್ಕ ಗೌರವ ದ್ರೌಪದಿ ಮುರ್ಮು

ಸಮೃದ್ಧ ಆತ್ಮನಿರ್ಭರ ಭಾರತ ನಿರ್ಮಾಣದ ಆಶಯದೊಂದಿಗೆ ನಾವೆಲ್ಲರೂ ಮುನ್ನಡೆಯೋಣ. ಸಮೃದ್ಧ ಆತ್ಮನಿರ್ಭರ ಭಾರತವನ್ನು ನಿರ್ಮಾಣ ಮಾಡೋಣ ಎಂದು ನೂತನ ರಾಷ್ಟ್ರಪತಿ ದ್ರೌಪದಿಮುರ್ಮು ಕರೆ ನೀಡಿ, ರಾಷ್ಟ್ರಪತಿಯಾಗಿ ತಮಗೆ ಸಿಕ್ಕಿರುವ ಗೌರವ ಇಡೀ ದೇಶದ ಬಡವರಿಗೆ ಸಿಕ್ಕ ಗೌರವ ಎಂದಿದ್ದಾರೆ.
ದೇಶದ ೧೫ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿಮುರ್ಮು ಅವರು, ದೇಶವು ಸ್ವಾತಂತ್ರ್ಯ ಪಡೆದು ೭೫ ವರ್ಷವಾದ ಪವಿತ್ರ ಸಂದರ್ಭದಲ್ಲಿ ನಾನು ರಾಷ್ಟ್ರಪತಿಯಾಗಿ ಜವಾಬ್ದಾರಿ ಸ್ವೀಕರಿಸಿದ್ದೇನೆ. ಇದು ಐತಿಹಾಸಿಕ ಸಂದರ್ಭವಾಗಿದೆ ಎಂದು ಬಣ್ಣಿಸಿ, ದೇಶದ ಎಲ್ಲ ಜನರ ಪ್ರೀತಿಯೇ ನನ್ನ ಶಕ್ತಿಯಾಗಿದೆ ಎಂದರು.
ಪೂರ್ವಭಾರತದ ಒಂದು ಸಣ್ಣ ಆದಿವಾಸಿ ಹಳ್ಳಿಯಿಂದ ನನ್ನ ಬದುಕಿನ ಯಾತ್ರೆ ಆರಂಭವಾಯಿತು. ಸಾಮಾನ್ಯ ಆದಿವಾಸಿ ಮಹಿಳೆ ಇಂದು ದೇಶದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದಾಳೆ. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ. ಈ ರಾಷ್ಟ್ರಪತಿ ಹುದ್ದೆ ನನಗೆ ಸಿಕ್ಕಿದ್ದು ಎಂದು ಅಂದುಕೊಂಡಿಲ್ಲ. ಇದು ಭಾರತದ ಎಲ್ಲ ಬಡವರಿಗೆ ಸಿಕ್ಕ ಗೌರವ. ನಮ್ಮ ದೇಶದ ಬಡವರು ರಾಷ್ಟ್ರಪತಿಯಾಗುವ ಕನಸು ಕಾಣಬಹುದು. ಅದನ್ನು ನನಸು ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಒಡಿಶಾದ ಕವಯತ್ರಿ ಭೀಮಾಬಾಯಿ ಅವರ ಕವಿತೆಯನ್ನು ರಾಷ್ಟ್ರಪತಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ, ತಮ್ಮ ಜೀವನದ ಹಿತ ಮತ್ತು ಅಹಿತಗಳಿಂತಲೂ ಲೋಕ ಕಲ್ಯಾಣದ ಭಾವನೆ ಮತ್ತು ಮುಖ್ಯವಾದದು. ಇದೇ ಆಶಯದೊಂದಿಗೆ ನಾವೆಲ್ಲರೂ ಮುನ್ನಡೆಯೋಣ ಸಮೃದ್ಧ ಆತ್ಮನಿರ್ಭರ ಭಾರತ ನಿರ್ಮಾಣ ಮಾಡೋಣ ಎಂದರು.ದೇಶದ ಪ್ರಗತಿಗೆ ಮಹಿಳೆಯರ ಕೊಡುಗೆ ದೊಡ್ಡದು ಎಂದು ಹೇಳಿದ ರಾಷ್ಟ್ರಪತಿಗಳು, ಭಾರತದಲ್ಲಿ ಮಹಿಳಾ ಸಶಕ್ತಿಕರಣಕ್ಕಾಗಿ ಹಲವು ಪ್ರಯತ್ನಗಳು ನಡೆಯುತ್ತಿವೆ. ಮಹಿಳೆಯರು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು.
ನಮ್ಮ ಯುವ ಜನರು ದೇಶದ ಭವಿಷ್ಯ. ದೇಶದ ರಾಷ್ಟ್ರಪತಿಯಾಗಿ ನಾನು ಯುವ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಆರ್ಥಿಕ ಸ್ಥಿರತೆ, ಪೂರೈಕ ಸರಪಳಿಯ ಪ್ರಾಮುಖ್ಯತೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಷ್ಟ್ರಪತಿ ದ್ರೌಪದಿಮುರ್ಮು ಅವರು, ಇದು ಭಾರತದ ಅಮೃತ ಕಾಲವಾಗಿದೆ. ಹಲವು ಕ್ಷೇತ್ರಗಳಲ್ಲಿ ಭಾರತ ಮುನ್ನಡೆ ಸಾಧಿಸಿದೆ ಎಂದರು.
ಭಾರತವು ೨೦೦ ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿದೆ. ಭಾರತವು ಕೊರೊನಾ ಸಂಕಷ್ಟ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳಿಗೆ ನೆರವಾಗಿತ್ತು. ವಿಶ್ವದ ಆರ್ಥಿಕ ಸ್ಥಿರತೆಗಾಗಿ ಮತ್ತು ಪೂರೈಕೆ ಸರಪಳಿಯ ಸುಸೂತ್ರ ಕಾರ್ಯನಿರ್ವಹಣೆಗಾಗಿ ಭಾರತ ತನ್ನ ಸಕ್ರಿಯ ಪಾತ್ರ ನಿರ್ವಹಿಸುವುದನ್ನು ಮುಂದುವರೆಸಲಿದೆ ಎಂದು ಅವರು ಹೇಳಿದರು.ಸ್ವಾತಂತ್ರ್ಯ, ಸ್ವಾಭಿಮಾನಕ್ಕಾಗಿ ಬಲಿದಾನ ಮಾಡಿದವರನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡ ನೂತನ ರಾಷ್ಟ್ರಪತಿಗಳು, ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ನಿಕಟಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರವರೆಗೂ ಎಲ್ಲರೂ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾನು ಸಹ ಈ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಇದೇ ರೀತಿ ನಿರ್ವಹಿಸಲು ಬಯಸುತ್ತೇನೆ ಎಂದರು.
ರಾಷ್ಟ್ರಪಿತ ಪೂಜ್ಯ ಮಹಾತ್ಮಗಾಂಧಿ ಅವರು ನಮಗೆ ಸ್ವರಾಜ್ಯ, ಸ್ವಚ್ಛತೆಯ ಮಾರ್ಗ ತೋರಿಸಿದ್ದರು. ನೇತಾಜಿ ಸುಭಾಷಚಂದ್ರಬೋಸ್, ನೆಹರು, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಸ್ವಾಭಿಮಾನ ಹೆಚ್ಚಿಸಲು ಹೋರಾಡಿದರು. ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ ಸೇರಿದಂತೆ ಹಲವು ವೀರ ವನಿತೆಯರು ದೇಶಕ್ಕಾಗಿ ಹೋರಾಡಿ ಮಡಿದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ನೆನಪಿಸಿಕೊಂಡರು.
ನೂತನ ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಹಿಂದಿಯಲ್ಲಿ ಮಾಡಿದ ಭಾಷಣದ ಇಂಗ್ಲೀಷ್ ಭಾವಾನುವಾದವನ್ನು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಓದಿದರು.