೧೪ ನೇ ದಿನಕ್ಕೆ ಮುಂದುವರಿದ ಜಂಗಮ ಸಮಾಜದ ಅನಿರ್ಧಿಷ್ಟ ಸತ್ಯಾಗ್ರಹ

ಲಿಂಗಸುಗೂರು,ಜು.೧೯- ಸಂವಿಧಾನದಡಿ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಬೇಡ ಜಂಗಮರಿಗೆ ಒದಗಿಸುವ ಮೂಲಕ ಸಂವಿಧಾನಿಕ ಹಕ್ಕು ಎತ್ತಿ ಹಿಡಿಯುವಂತೆ ರಾಜ್ಯದ ೧೮ ಸಾವಿರ ಜಂಗಮ ಮಠಾಧೀಶರು ಒಂದೆಡೆ ಸೇರಿ ಒಂದು ಕೂಗು ಹಾಕಿದರೆ ಸಾಕು ಸರ್ಕಾರಕ್ಕೆ ಬಿಸಿ ತಟ್ಟಲಿದೆ ಎಂದು ಇರಕಲ್ ಮಠದ ಬಸವಪ್ರಸಾದ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸಿ ಕಚೇರಿ ಆವರಣದಲ್ಲಿ ಕಳೆದ ೧೩ ದಿನಗಳಿಂದ ಬೇಡ ಜಂಗಮ ಸಮುದಾಯದ ಮುಖಂಡರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿಗೆ ಬೆಂಬಲಿಸಿ ಸಲಹೆ ನೀಡಿದ ಅವರು, ಅನ್ಯ ಸಮುದಾಯದ ಕೇವಲ ಒಬ್ಬ ಪಠಾಧೀಶರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅಗತ್ಯ ಸೌಲತ್ತು ತರುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಅದರಂತೆ ಬೇಡ ಜಂಗಮರು ಹೊಸದಾಗಿ ಮೀಸಲಾತಿ ನೀಡುವಂತೆ ಕೇಳುತ್ತಿಲ್ಲ. ಸಾಂವಿಧಾನಿಕವಾಗಿ ಅಡಕವಾಗಿರುವ ವೀರಶೈವ ಲಿಂಗಾಯತ ಜಂಗಮರೇ ಬೇಡ ಜಂಗಮರಾಗಿದ್ದು, ಬೇಡ ಜಂಗಮರ ಬೇಡಿಕೆಯ ಹೋರಾಟವನ್ನು ಜಂಗಮ ಸಮಾಜದ ೧೮ ಸಾವಿರ ಗುರು-ವಿರಕ್ತ ಮಠಾಧೀಶರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜದ ರಾಜ್ಯಾಧ್ಯಕ್ಷ, ಹುಟ್ಟು ಹೋರಾಟಗಾರ ಬಿ.ಡಿ.ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಸತ್ಯ ಪ್ರತಿಪಾದನಾ ಸತ್ಯಾಗ್ರಹಕ್ಕೆ ಪಂಚಾಚಾರ್ಯರು, ಗುರು-ವಿರಕ್ತ ಮಠಾಧೀಶರು ಮತ್ತು ಜಂಗಮ ಸಮುದಾಯ ಜು.೨೩ ರಂದು ಸತ್ಯಾಗ್ರಹಕ್ಕೆ ಬೆಂಬಲ ನೀಡುವ ಮೂಲಕ ಬೇಡ ಜಂಗಮರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಅನಿರ್ಧಿಷ್ಟ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಡಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಂಗಮ ಸಮುದಾಯ ಅನೇಕ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಸಂವಿಧಾನಬದ್ಧ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವುದು ನ್ಯಾಯಯುತವಾಗಿದೆ. ಜಂಗಮರ ಬೇಡಿಕೆ ಈಡೇರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಯಲಗಲದಿನ್ನಿ, ಮುಖಂಡರಾದ ಬಸವರಾಜಸ್ವಾಮಿ ಎಳೆಮನಿ, ರಮೇಶ ಶಾಸ್ತ್ರಿ, ಜಂಬಯ್ಯ ಹಿರೇಮಠ, ಮಹೇಶ ನಂದಿಕೋಲಮಠ, ಜಗದೀಶ ಕೆಇಬಿ, ಗುಂಡಯ್ಯ ಸೊಪ್ಪಿಮಠ, ಅಮರೇಶ ಗಂಭೀರಮಠ, ಶರಣಯ್ಯ ದಾಸೋಹಮಠ, ಚನ್ನಬಸವ ಹಿರೇಮಠ, ಚಂದ್ರಶೇಖರ ಹಿರೇಮಠ, ವೀರಭದ್ರಯ್ಯ ಗುಂತಗೋಳ, ಶರಣಯ್ಯ ಹಿರೇಮಠ, ಈಶ್ವರಯ್ಯ, ಗಿರಿಜಾ ಹಿರೇಮಠ, ಗುರುದೇವಿ, ಶೈಲ ನಂದಿಕೋಲಮಠ, ಪೂರ್ಣಿಮಾ ಹಿರೇಮಠ, ಸುಜಾತಾ ಶಾಸ್ತ್ರಿ, ನಂದಿನಿ ಜಗವತಿಮಠ, ಉಮಾದೇವಿ, ಪುಷ್ಪಾ, ವಿಜಯಲಕ್ಷ್ಮೀ, ಭ್ರಮರಾಂಭ, ಮೀನಾಕ್ಷಿ, ಲತಾ ಹಿರೇಮಠ, ಶಶಿಕಲಾ ಸೇರಿದಂತೆ ಇತರರು ಇದ್ದರು.