
ಜಗಳೂರು.ಮಾ.೨೮ : ಜಗಳೂರು ತಾಲೂಕಿನಲ್ಲಿ ೨೦ ಗ್ರಾಮಗಳನ್ನು ಹೊಸ ಕಂದಾಯ ಗ್ರಾಮಗಳನ್ನಾಗಿ ರಚನೆ ಮಾಡಲಾಗಿದ್ದು, ಒಟ್ಟು ೧೪೭೯ ಜನರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ಗುರುಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ೧೪೭೯ ಜನರಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲಾ ಜನರಿಗೂ ಸೂರು ನೀಡಬೇಕೆಂಬ ನಮ್ಮ ಬಿಜೆಪಿ ಸರ್ಕಾರದ ಸಿದ್ಧಾಂತವಾಗಿದೆ. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಬಡ ಜನರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳನ್ನು ತಂದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇಸ್ವತ್ತು ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ತಲುಪಿಸಲಿದ್ದಾರೆ. ಇದು ಯಾವ ಸರ್ಕಾರದಲ್ಲಿ ಮಾಡಲು ಸಾಧ್ಯವಿಲ್ಲ ನಮ್ಮ ಸರ್ಕಾರದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ ಹೊಸ ಕಂದಾಯ ಗ್ರಾಮಗಳಾಗಿ ರಚನೆ ಮಾಡಲಾಗಿದೆ. ರಚನೆ ಮಾಡಿದ ಎಲ್ಲಾ ಗ್ರಾಮಗಳಿಗೆ ಹಕ್ಕು ಪತ್ರ ವಿತರಣೆ ನೀಡಲಾಗುತ್ತದೆ. ಸುಮಾರು ವರ್ಷಗಳಿಂದ ಇವರಿಗೆ ಯಾವುದೇ ಹಕ್ಕು ಪತ್ರಗಳನ್ನು ನೀಡಿದ್ದಿಲ್ಲ. ಹಾಗಾಗಿ ೧೭ ಸರ್ಕಾರಿ ಹೆಸರಿನ ಜಾಗವನ್ನು ಗುರುತು ಮಾಡಿ ನೀಡಲಾಗಿದೆ. ಮತ್ತು ೩ ಗ್ರಾಮಗಳ ಬೇರೆ ಕಡೆಯಿಂದ ಜಮೀನು ಖರೀದಿ ಮಾಡಿ ಒಟ್ಟು ೨೦ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಿ ೧೪೭೯ ಹಕ್ಕು ಪತ್ರಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ, ಕಾನನಕಟ್ಟೆ ತಿಪ್ಪೇಸ್ವಾಮಿ, ಬಿಳಿಚೋಡು ಕಂದಾಯ ಅಧಿಕಾರಿ ಧನಂಜಯ್, ಕಸಬಾ ಕಂದಾಯಾಧಿಕಾರಿ ಕುಬೇಂದ್ರ ನಾಯಕ್ ಇತರರು ಉಪಸ್ಥಿತರಿದ್ದರು.