೧೩ ಮಂದಿ ಸೆರೆ ೨.೫ ಕೋಟಿ ಡ್ರಗ್ ವಶ

ಖಾಕಿ ಭರ್ಜರಿ ಬೇಟೆ

ಬೆಂಗಳೂರು,ಮಾ.೧೬-ಅಂತರಾಷ್ಟ್ರೀಯ ಅಂತರರಾಜ್ಯ, ಅಂತರ ಜಿಲ್ಲೆ ಹಾಗೂ ಸ್ಥಳೀಯ ಡ್ರಗ್‌ಪೆಡ್ಲರ್ ಗಳ ಜಾಲವನ್ನು ಭೇದಿಸಿ ಭರ್ಜರಿ ಬೇಟೆಯಾಡಿರುವ ಸಿಸಿಬಿ ಪೊಲೀಸರು ೨ ಕೋಟಿ ೪೮ ಲಕ್ಷ ಮೌಲ್ಯದ ವಿವಿಧ ಮಾದರಿಯ ಡ್ರಗ್ಸ್ ನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲದಲ್ಲಿ ಭಾಗಿಯಾಗಿದ್ದ ೧೩ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೯ ಪ್ರಕರಣಗಳನ್ನು
ಬೇಧಿಸಿ ೨ ಕೋಟಿ ೪೮ ಲಕ್ಷ ಮೌಲ್ಯದ ೧ ಕೆಜಿ ೫೫೬ ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, ೪೧ ಎಕ್ಸ್ ಟೆನ್ಸಿ ಪಿಲ್ಸ್ ಗಳು, ೨೫ ಕೆಜಿ ಗಾಂಜಾ, ೨ ಕಾರುಗಳು,೧ ಬೈಕ್,೯ ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಹೆಣ್ಣೂರು ವ್ಯಾಪ್ತಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಕೇರಳ ಮೂಲದ ಡ್ರಗ್‌ಪೆಡ್ಲರ್ ಗಳನ್ನು ಬಂಧಿಸಿದ್ದು, ಬೆಂಗಳೂರಿನ ಸ್ಥಳೀಯ ಡ್ರಗ್ ಪೆಡ್ಲರ್ ಗಳಿಂದ ಕಡಿಮೆ ಬೆಲೆಗೆ ಖರೀದಿಸುವ ಎಂಡಿಎಂಎ ಕ್ರಿಸ್ಟೆಲ್ ಅನ್ನು ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕೃತ್ಯದಲ್ಲಿ ತೊಡಗಿದ್ದ ಎಂದು ಹೇಳಿದರು.
ಕೊಡಿಗೇಹಳ್ಳಿಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಮುಂಬೈ ಮತ್ತು ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದು ನೈಜೀರಿಯಾದ ಮೂಲದ ಮಹಿಳೆಯಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದು ಇವರ ವಿರುದ್ದ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್.ಎಸ್.ಆರ್ ಲೇಔಟ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್‌ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಚಾಮರಾಜನಗರ ಮೂಲದ ಡ್ರಗ್‌ಪೆಡ್ಲರ್ ನನ್ನು ಬಂಧಿಸಿದ್ದು ಈತನು ತನ್ನ ಕಾರ್ ಸೀಟ್ ನ್ನು ಮಾರ್ಪಾಟು ಮಾಡಿಸಿಕೊಂಡು ಅದರೊಳಗೆ ಡ್ರಗ್ಸ್‌ಗಳನ್ನು ಇಟ್ಟುಕೊಂಡು ಐಟಿ/ಬಿಟಿ ಉದ್ಯೋಗಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಫೋಟೋ ಲೊಕೇಶನ್ ಮುಖಾಂತರ ಡ್ರಗ್ಸ್ ಸರಬರಾಜು ಮಾಡುತ್ತಿದ್ದು. ಈತನ ವಿರುದ್ಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಸುಡಾನ್ ದೇಶದ ಒಬ್ಬ ಆರೋಪಿಯನ್ನು ಬಂಧಿಸಿ ಅತ ಸುಡಾನ್ ದೇಶದ ಮತ್ತೊಬ್ಬ ಮಹಿಳೆಯೊಂದಿಗೆ ಸೇರಿ ಬೆಂಗಳೂರಿನ ಸ್ಥಳೀಯ ಐಟಿ/ಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸರಬರಾಜು ಮಾಡಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ.ತಲಘಟ್ಟಪುರ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಕೇರಳ ಮೂಲದ ಇಬ್ಬರನ್ನು ಬಂಧಿಸಿದ್ದು, ಕೇರಳದಲ್ಲಿನ ಪ್ರಮುಖ ಆರೋಪಿಯ ನಿರ್ದೇಶನದ ಮೇರೆಗೆ ಫೋಟೋ ಲೊಕೇಷನ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದು ಹಣವನ್ನು ಆನ್‌ಲೈನ್ ಮುಖಾಂತರ ಪಡೆದುಕೊಂಡು ಇದರಿಂದ ಬಂದ ಲಾಭದಲ್ಲಿ ಬಂಧಿತ ಆರೋಪಿಗಳಿಗೆ ಕಮೀಷನ್ ರೂಪದಲ್ಲಿ ಹಣವನ್ನು ನೀಡುತ್ತಿರುವುದನ್ನು ಪತ್ತೆಹಚ್ಚಿ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕೋರಮಂಗಲ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಬೆಂಗಳೂರಿನ ಒಬ್ಬ ಮತ್ತು ಕೇರಳದ ಮತ್ತೊಬ್ಬ ವ್ಯಕ್ತಿಗಳನ್ನು ಬಂಧಿಸಿದ್ದು, ಪರಿಚಯಸ್ಥ ಗಿರಾಕಿಗಳಿಗೆ ಡ್ರಗ್ಸ್ ಸರಬರಾಜು ಮಾಡಿ ಬಂದ ಹಣವನ್ನು ಹಂಚಿಕೊಳ್ಳುವ ಕೃತ್ಯದಲ್ಲಿ ತೊಡಗಿರುವುದನ್ನು ಪತ್ತೆಹಚ್ಚಿ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಆಂಧ್ರಪ್ರದೇಶದ ಮೂಲದ ಒಬ್ಬ ಡ್ರಗ್ಸ್ ಪೆಡ್ಲರ್ ನನ್ನು ಬಂಧಿಸಿದ್ದು ಪರಿಚಯಸ್ಥ ಗಿರಾಕಿಗಳಿಗೆ ಡ್ರಗ್ಸ್ ಸರಬರಾಜು ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದ ಪತ್ತೆಹಚ್ಚಲಾಗಿದೆ ಎಂದು ಹೇಳಿದರು.

ಮಾದಕ ದ್ರವ್ಯ ನಿಗ್ರಹ ದಳದವರು ವಶಪಡಿಸಿಕೊಂಡಿರುವ ೨ ಕೋಟಿ ರೂ. ಮೌಲ್ಯದ ಡ್ರಗ್ಸ್‌ನ್ನು ಪೋಲಿಸ್ ಕಮೀಷನರ್ ಕಚೇರಿಯಲ್ಲಿ ಆಯುಕ್ತ ಪ್ರತಾಪ್ ರೆಡ್ಡಿ ವೀಕ್ಷಿಸುತ್ತಿರುವುದು. ಪೋಲಿಸ್ ಅಧಿಕಾರಿಗಳು ಇದ್ದಾರೆ.

ಕೆ.ಆರ್.ಪುರ ವ್ಯಾಪ್ತಿಯಲ್ಲಿ ನೈಜೀರಿಯಾದ ಮೂಲದ ಆರೋಪಿಯನ್ನು ಬಂಧಿಸಿ ತಲೆಮರೆಸಿಕೊಂಡಿರುವ ಮತ್ತೊಬ್ಬ ನೈಜೀರಿಯಾ ಪ್ರಜೆಯಿಂದ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾಡಿ ಪರಿಚಯಸ್ಥ ಗಿರಾಕಿಗಳಿಗೆ ಡ್ರಗ್ಸ್ ಸರಬರಾಜು ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದು ಈತನ ವಿರುದ್ದ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಾಣಸವಾಡಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡು ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಉಗಾಂಡ ದೇಶದ ಒಬ್ಬ ಮಹಿಳೆಯನ್ನು ಬಂಧಿಸಿ ಫೋಟೋ ಲೊಕೇಷನ್‌ಗಳ ಮೂಲಕ ಪರಿಚಯಸ್ಥ ಗಿರಾಕಿಗಳಿಗೆ ಡ್ರಗ್ಸ್ ಸರಬರಾಜು ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದನ್ನು ಪತ್ತೆಹಚ್ಚಿ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ/ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರಿದ್ದರು.