
ಪಾಕ್ ಪ್ರಜೆ ಬಂಧನ
ನವದೆಹಲಿ,ಮೇ.೧೪- ಪಾಕಿಸ್ತಾನದಿಂದ ಪೂರೈಕೆ ಆಗಿದ್ದ ಭಾರಿ ಪ್ರಮಾಣದ ಮಾದಕ ವಸ್ತುವನ್ನು ಪತ್ತೆ ಮಾಡಿರುವ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಕೇರಳದ ಕೊಚ್ಚಿ ಬಂದರಿನಲ್ಲಿ ಬರೋಬ್ಬರಿ ೧೨ ಸಾವಿರ ಕೋಟಿ ರೂ ಮೌಲ್ಯದ ೨೫೦೦ ಕೆಜಿ ಡ್ರಗ್ಸ್ ಜಪ್ತಿ ಮಾಡಿ ಪಾಕ್ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.
ಇದು ದೇಶದ ಅತಿ ದೊಡ್ಡ‘ಮೆಟಂಫೆಟಮಿನ್’ ಡ್ರಗ್ಸ್ ಜಪ್ತಿ ಮಾಡಿದ ಪ್ರಕರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆ ಜತೆಗೆ ‘ಆಪರೇಶನ್ ಸಮುದ್ರಗುಪ್ತ’ ಹೆಸರಿನಲ್ಲಿ ಮಾದಕ ವಸ್ತು ವಿರುದ್ಧ ನಡೆಯುವ ಜಂಟಿ ಕಾರ್ಯಾಚರಣೆ ಮೂಲಕ ಇದರ ಜಪ್ತಿ ಮಾಡಲಾಗಿದೆ.
ಇದು ೩ನೇ ಅತಿ ಬೃಹತ್ ಪ್ರಮಾಣದ ಮಾದಕ ವಸ್ತು ವಶವಾಗಿದೆ ಹಾಗೂ ಒಂದೂವರೆ ವರ್ಷದಲ್ಲಿ ಮೊದಲ ಬಾರಿಯಾಗಿದೆ ಎಂದು ಎನ್‌ಸಿಬಿ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ‘ಮದರ್ ಶಿಪ್’ ಹೆಸರಿನ ಹಡಗಿನಲ್ಲಿ ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿತ್ತು. ಈ ಹಡಗಿನ ಮೂಲಕ ಚಿಕ್ಕ ಚಿಕ್ಕ ದೋಣಿಗಳಿಗೆ ಡ್ರಗ್ಸ್ ಚೀಲಗಳನ್ನು ಇಳಿಸಿಕೊಂಡು, ಅವುಗಳ ಮೂಲಕ ಆಯಾ ದೇಶಗಳಿಗೆ ಡ್ರಗ್ಸ್ ರವಾನಿಸಲಾಗುತ್ತಿತ್ತು’ ಎಂದು ಎನ್‌ಸಿಬಿ ತಿಳಿಸಿದೆ.
೧೩೪ ಚೀಲಗಳಷ್ಟು ಮೆಟಂಫೆಟಮಿನ್ ಅನ್ನು ವಶಪಡಿಸಿಕೊಂಡು ಒಬ್ಬ ಪಾಕ್ ಪ್ರಜೆಯನ್ನು ಜಂಟಿ ಕಾರ್ಯಾಚಣೆಯಲ್ಲಿ ನೌಕಾಪಡೆ ಸಹಾಯದಿಂದ ಬಂಧಿಸಲಾಗಿದೆ. ಇದು ಅತ್ಯಂತ ಶುದ್ಧವಾದ ಡ್ರಗ್ಸ್ ಆಗಿದೆ. ವಶಪಡಿಸಿಕೊಳ್ಳಲಾದ ಡ್ರಗ್ಸ್ ಪ್ರಮಾಣವನ್ನು ಅಂದಾಜಿಸುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಆದರೆ ಅಂದಾಜಿನ ಪ್ರಕಾರ ೨೫೦೦ ಕೆಜಿ ಇದೆ’ ಎಂದು ಎನ್‌ಸಿಬಿ ತಿಳಿಸಿದೆ.
ಒಟ್ಟಾರೆ ಸಮುದ್ರಗುಪ್ತ ಕಾರ್ಯಾಚರಣೆಯಲ್ಲಿ ಈವರೆಗೆ ೩೨೦೦ ಕೇಜಿ ಮೆಟಂಫೆಟಮಿನ್, ೫೦೦ ಕೆಜಿ ಹೆರಾಯಿನ್ ಹಾಗೂ ೫೨೯ ಕೇಜಿ ಹಶೀಷ್ ಜಪ್ತಿ ಮಾಡಲಾಗಿದೆ ಎಂದು ಅದು ಮಾಹಿತಿ ನೀಡಿದೆ.