೧೨ ರಿಂದ ೧೪ತಿಂಥಣಿ ಬ್ರಿಜ್ ಕನಕ ಗುರು ಪೀಠದಲ್ಲಿ ’ಹಾಲು ಮತ ಸಂಸ್ಕೃತಿ ವೈಭವ’ ಸಾಂಸ್ಕೃತಿಕ ಉತ್ಸವ

ಕವಿತಾಳ.ಜ.೧೧-ರಾಯಚೂರ ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ ನಲ್ಲಿರುವ ಕಾಗಿನೆಲೆ ಗುರುಪೀಠದ ಕಲ್ಬುರ್ಗಿ ವಿಭಾಗದ ಕನಕ ಗುರು ಪೀಠ ಕೊಡಮಾಡುವ ಪ್ರತಿಷ್ಠಿತ ’ಕನಕ ರತ್ನ’ ಪ್ರಶಸ್ತಿಗೆ ವಿಶ್ರಾಂತ ಕುಲಪತಿ, ಜನಪದ ತಜ್ಞ ಪ್ರೊ.ಎಚ್ .ಜೆ.ಲಕ್ಕಪ್ಪ ಗೌಡ , ’ಸಿದ್ದಶ್ರೀ’ ಪ್ರಶಸ್ತಿಗೆ ಹಂಪಿಯ ಸುಭದ್ರಮ್ಮ ಕಾರಮಿಂಚಪ್ಪ ಹಾಗೂ ’ಹಾಲುಮತ ಭಾಸ್ಕರ’ ಪ್ರಶಸ್ತಿ ಗೆ ಕಡೂರಿನ ವಕೀಲ ಎಚ್.ಎಸ್.ಹೆಳವರ ಪಾತ್ರರಾಗಿದ್ದಾರೆ ಶ್ರೀ ಮಠದ ಸಿದ್ದರಾಮನಂದ ಸ್ವಾಮಿಜೀ ಹೇಳಿದ್ದಾರೆ ಎಂದು ಶಿವಣ್ಣ ವಕೀಲರು ಮತ್ತು ಪಟ್ಟಣ ಪಂಚಾಯತಿ ಸದಸ್ಯ ಗಂಗಪ್ಪ ದಿನ್ನಿ ಪತ್ರಿಕೆ ಗೋಷ್ಠಿಯಲ್ಲಿ ಮಾತನಾಡಿದರು.
ಪ್ರಶಸ್ತಿಯು ತಲಾ ೫೦ ಸಾವಿರ ರೂಪಾಯಿ ನಗದು ಹಾಗು ಸ್ಮರಣಿಕೆ ಒಳಗೊಂಡಿದೆ.
ಪ್ರಶಸ್ತಿಯನ್ನು ಇದೇ ಜನವರಿ ೧೨ ರಿಂದ ೧೪ ರ ವರೆಗೆ ತಿಂಥಣಿ ಬ್ರಿಜ್ ನಲ್ಲಿರುವ ಕನಕ ಗುರು ಪೀಠದಲ್ಲಿ ನಡೆಯಲಿರುವ ’ಹಾಲು ಮತ ಸಂಸ್ಕೃತಿ ವೈಭವ’ ಸಾಂಸ್ಕೃತಿಕ ಉತ್ಸವದಲ್ಲಿ ಪ್ರದಾನ ಮಾಡಲಾಗುವುದು.
ಕುರುಬರು ಜಗತ್ತಿನ ಮೊಟ್ಟ ಮೊದಲ ಬುಡಕಟ್ಟು ಸಮುದಾಯಕ್ಕೆ ಸೇರಿದವರು.ಕುರುಬರ ಸಾಂಸ್ಕೃತಿಕ ಇತಿಹಾಸ ದೇಶದಲ್ಲೇ ವಿಶಿಷ್ಟವಾದದ್ದು.ಅವರ ಸಮೃದ್ಧ ಸಾಂಸ್ಕೃತಿಕ ಅನೇಕ ಆಚರಣೆಗಳು,ಅಲೆಮಾರಿತನ ಅದಕ್ಕೆ ಸಾಕ್ಷಿ ಒದಗಿಸುತ್ತವೆ.ಅಂತಹ ಸಾಂಸ್ಕೃತಿಕ ವೈಭವವು ಕಳೆದ ೨೧ ವರ್ಷಗಳಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ನಲ್ಲಿರುವ ಶ್ರೀ ಕಾಗಿನೆಲೆ ಗುರುಪೀಠದ ಕಲ್ಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ಅನಾವರಣಗೊಳ್ಳುತ್ತಿದೆ.
ಈ ಬಾರಿ ಇದೇ ಜನವರಿ ೧೨ ರಿಂದ ೧೪ ರವರೆಗೆ ಮೂರು ದಿನಗಳ ಕಾಲ ಕುರುಬರ ಸಾಂಸ್ಕೃತಿಕ ಇತಿಹಾಸದ ಮಹತ್ವದ ಅಂಶಗಳನ್ನು ಸಾರುವ ಹಾಲುಮತ ಸಂಸ್ಕೃತಿ ವೈಭವ-೨೦೨೧’* ತಿಂಥಣಿ ಬ್ರಿಜ್ಡ್ ನಲ್ಲಿರುವ ಶ್ರೀ ಕನಕ ಗುರು ಪೀಠದಲ್ಲೇ ನಡೆಯಲಿದೆ.
ಜನವರಿ ೧೨ ರಂದು ಬೆಳಿಗ್ಗೆ ೧೧ಕ್ಕೆ ’ಬೀರ ದೇವರ ಉತ್ಸವ’ ಮತ್ತು ಪಂಚಾಯತಿ ಸದಸ್ಯರ ಸಮಾವೇಶವನ್ನು ಉದ್ಘಾಟಿಸುವ ಮೂಲಕ ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ಧರಾಮಯ್ಯ ಉತ್ಸವಕ್ಕೆ ಚಾಲನೆ ನೀಡುವರು.ಗೋವಾದ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಕವಳೇಕರ್ ಅವರು, ’ಕೊಡಗಿನ ಕುರುಬ ಬುಡಕಟ್ಟುಗಳು’ ,ಕುರುಮನ್ಸ್ ಟ್ರೈಬ್ಸ್’, ಹಾಗೂ ಬೀರಪ್ಪ ಸಂಪ್ರದಾಯ ಪುಸ್ತಕಗಳನ್ನು ಬಿಡುಗಡೆ ಮಾಡುವರು.ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು. ಮಧ್ಯಾಹ್ನ ೨.೩೦ಕ್ಕೆ ರೋಮಾಂಚಕಾರಿ ’ಟಗರು ಕಾಳಗ’ ನಡೆಯಲಿದೆ.
ಅಂದು ಸಂಜೆ ೭ ಕ್ಕೆ ಚುಟುಕು ಹಾಸ್ಯ ಸಾಹಿತ್ಯ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
೧೩ ರಂದು ಬೆಳಿಗ್ಗೆ ೧೧ಕ್ಕೆ ’ಟಗರು ಜೋಗಿಗಳು-ಹೆಳವರು-ಕಾಡುಸಿದ್ಧರ ಸಮಾವೇಶವನ್ನು ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಉದ್ಘಾಟಿಸುವರು.ಮಾಜಿ ಸಚಿವ ಎಚ್.ಎಂ.ರೇವಣ್ಣ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ ೩ಕ್ಕೆ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದಿಂದ ಅಲೆಮಾರಿಗಳ ಚಿಂತನಾ ಗೋಷ್ಟಿ ಏರ್ಪಡಿಸಲಾಗಿದೆ.
ಹಾಲುಮತ ಎಂಬುದು ಹಲವು ಜನಾಂಗಗಳ ಒಕ್ಕೂಟ. ಹರಿದು ಹಂಚಿ ಹೋಗಿರುವ ಸಮುದಾಯಗಳಲ್ಲಿ ಸುಡಗಾಡು ಸಿದ್ಧರು ಹಾಲುಮತ ಜನಾಂಗದ ಒಂದು ಭಾಗವಾಗಿದ್ದು, ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯ ಪವಾಡಗಳನ್ನು ಜೀವಂತವಾಗಿರಿಸಿಕೊಂಡು ಪೂರ್ವಜರ ಆತ್ಮಗಳಿಗೆ ಶಾಂತಿ ಕೋರುತ್ತ , ಸ್ಮಶಾನವನ್ನು ಆಶ್ರಯಿಸಿಕೊಂಡು ಬದುಕುವ ಜನ ಸಮೂಹವಾಗಿದೆ.ಟಗರು ಜೋಗಿಗಳು ಹಾಲು ಮತ ಪರಂಪರೆಯ ಇತಿಹಾಸವನ್ನು ಸಂಚಾರ ಮಾಡುತ್ತ ಪ್ರಚಾರ ಮಾಡುತ್ತ ಬಂದ ಸಮುದಾಯ.ಹಾಲುಮತ ಇತಿಹಾಸಕ್ಕೆ ಇವರೇ ವಾರಸುದಾರರು.
ಉಚಿತ ರಕ್ತ ಪರೀಕ್ಷೆ , ರಕ್ತ ದಾನ ಶಿಬಿರ, ಕಣ್ಣು ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
೧೪ ರಂದು ಗುರುವಾರ ಬೆಳಿಗ್ಗೆ ೧೧ಕ್ಕೆ ಶ್ರೀ ಬೊಮ್ಮಗೊಂಡೇಶ್ವರ – ಶ್ರೀ ಸಿದ್ದರಾಮೇಶ್ವರ ಉತ್ಸವ ನಡೆಯಲಿದೆ .ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು,ಮಾಜಿ ಸಚಿವ ಎಚ್.ವಿಶ್ವನಾಥ್ ಅಧ್ಯಕ್ಷತೆವಹಿಸುವರು.ಶ್ರೀ ಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸುವರು.
ಅಂದು ಮಧ್ಯಾಹ್ನ ಎರಡಕ್ಕೆ ಜನಾಕರ್ಷಕ ಸ್ಪರ್ಧೆಯಾದ ಎತ್ತುಗಳ ಭಾರ ಎಳೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂಜೆ ಹೆಳವ ಸಂಸ್ಕೃತಿ ಆಧಾರಿತ ’ನೀಲಾ’ ಚಲನಚಿತ್ರ ಪ್ರದರ್ಶನವಿರುತ್ತದೆ. ಜಿಲ್ಲೆಯ ಸಮಾಜದ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹೇಳಿದರು. ಜಡೆ ಕರಿಯಪ್ಪ ಪೂಜಾರಿ, ಪಾತಾಪೂರ ಶಿವಶಂಕರಪ್ಪ ಪೂಜಾರಿ, ಜಿ.ಪಂ. ಸದಸ್ಯ ಮಾಳಪ್ಪ ತೋಳ, ಮುಖಂಡ ಕರಿಯಪ್ಪ ಯಕ್ಲಾಸಪೂರ ಸೇರಿ ಇತರರಿದ್ದರು.