೧೨ ಭಾಷೆಗಳ ಅಕ್ಷರ ಮೂಡಿಸುವ ವಿನೂತನ ಕೀಲಿಮಣೆ ನಾಸಾ ವಿಜ್ಞಾನಿಯಿಂದ ರಾಮಕೃಷ್ಣ ಶಾಲೆಗೆ ಕೊಡುಗೆ

ಪುತ್ತೂರು, ಎ.೨೩- ನಮ್ಮ ಭಾರತೀಯ ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರಂತರವಾಗಿ ಸಾಧನೆ ಮಾಡಿ ವಿವಿಧ ಸ್ವದೇಶಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಂಸ್ಕೃತ, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಅಕ್ಷರ ಮೂಡಿಸಬಲ್ಲ ವಿನೂತನ ಮಾದರಿಯ ಕೀಲಿಮಣೆಯನ್ನು ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಗೆ ಅಮೇರಿಕಾದ ನಾಸಾ ವಿಜ್ಞಾನಿ ಡಾ. ಗುರುಪ್ರಸಾದ್ ಅವರು ನೀಡಿದರು.

  ಶಾಲೆಯ ಮಕ್ಕಳ ಸದುಪಯೋಗಕ್ಕಾಗಿ ನಾಡಿನಾದ್ಯಂತ ಹಲವು ಶೈಕ್ಷಣಿಕ ಸಂಸ್ಥೆಗಳಿಗೆ ಈ ಕೀಲಿಮಣೆಯ ಕೊಡುಗೆಯನ್ನು ಅವರು ಈಗಾಗಲೇ ನೀಡಿದ್ದಾರೆ. ಪುತ್ತೂರಿನ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದನ್ನು ಮನಗಂಡು ಡಾ| ಗುರುಪ್ರಸಾದ್ ರವರು ಸಂಸ್ಥೆಗೆ ಭೇಟಿ ನೀಡಿ, ಸ್ವದೇಶಿ ನಿರ್ಮಿತ ೧೨ ಭಾರತೀಯ ಭಾಷೆಯನ್ನೊಳಗೊಂಡ ವಿನೂತನ ಕೀಲಿಮಣೆಯನ್ನು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಮುಖ್ಯ ಗುರು ರೂಪಕಲಾ ಕೆ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಶ್ರೀಪ್ರಸಾದ್ ಪಾಣಾಜೆ, ಜಗದೀಶ್ ಕಜೆ  ಉಪಸ್ಥಿತರಿದ್ದರು.