೧೨ ಪ್ರದೇಶಗಳನ್ನು ಮರು ವಶಕ್ಕೆ ಪಡೆದ ಉಕ್ರೇನ್

ಕೀವ್ (ಉಕ್ರೇನ್), ನ.೧೧- ಹಲವು ದಿನಗಳುಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದ ಸದ್ಯದಲ್ಲೇ ಅಂತ್ಯಗೊಳ್ಳುವ ಮುನ್ಸೂಚನೆ ಲಭಿಸಿದೆ. ಯುದ್ದ ಅರಂಭವಾದ ಬಳಿಕ ರಷ್ಯಾ ವಶಪಡಿಸಿಕೊಂಡಿದ್ದ ಹಲವು ಭಾಗಗಳನ್ನು ಇದೀಗ ಉಕ್ರೇನ್ ಮರುವಶಕ್ಕೆ ಪಡೆದುಕೊಳ್ಳುತ್ತಿದೆ. ಸದ್ಯ ಕಳೆದುಕೊಂಡಿದ್ದ ೧೨ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಉಕ್ರೇನ್ ತನ್ನ ವಶಕ್ಕೆ ತೆಗೆದುಕೊಂಡಿದೆ.
ಖೆರ್ಸನ್ ಪ್ರಾಂತ್ಯದಿಂದ ರಷ್ಯಾ ವಾಪಸಾತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇದೀಗ ಉಕ್ರೇನ್ ೧೨ಕ್ಕೂ ಹಲವು ಪ್ರಾಂತ್ಯಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಿದೆ. ಅಲ್ಲದೆ ಗುರುವಾರ ತಡರಾತ್ರಿ ಉಕ್ರೇನಿಯನ್ ಪಡೆಗಳು ಡ್ನಿಪ್ರೊ ನದಿಯ ಮುಖಭಾಗದಲ್ಲಿರುವ ಖರ್ಸನ್ ನಗರಕ್ಕೆ ಹತ್ತಿರವಾಗುತ್ತಿರುವ ಸೂಚನೆಗಳಿವೆ ಎಂದು ಉಕ್ರೇನಿಯನ್ ಮಿಲಿಟರಿ ವಿಶ್ಲೇಷಕ ಹೇಳಿದ್ದಾರೆ. ಹಾಗಾಗಿ ಖೆರ್ಸನ್‌ನಿಂದ ರಷ್ಯಾ ತೆರಳಿದ ಬಳಿಕ ಇದೀಗ ಉಕ್ರೇನ್ ಪಡೆಗಳು ಈ ಪ್ರದೇಶದತ್ತ ಮುನ್ನುಗುತ್ತಿದೆ. ಆದರೆ ಖೆರ್ಸನ್ ಪ್ರಾಂತ್ಯದಲ್ಲಿ ಈಗಲೂ ರಷ್ಯಾದ ೪೦ ಸಾವಿರ ಯೋಧರು ಉಪಸ್ಥಿತರಿದ್ದು, ಸಂಪೂರ್ಣವಾಗಿ ಸ್ಥಳದಿಂದ ವಾಪಸಾಗಿ ಮಾಡಲು ಇನ್ನೂ ಒಂದು ವಾರದ ಸಮಯ ಬೇಕಾಗಬಹುದು ಎಂದು ಹಲವು ಅಂದಾಜಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸೆಪ್ಟೆಂಬರ್ ಅಂತ್ಯದಲ್ಲಿ ಸ್ವಾಧೀನಪಡಿಸಿಕೊಂಡಿರುವುದಾಗಿ ಹೇಳಿಕೊಂಡ ನಾಲ್ಕು ಪ್ರದೇಶಗಳಲ್ಲಿ ಖರ್ಸನ್ ಪ್ರಾಂತ್ಯ ಕೂಡ ಸೇರಿದೆ. ಆ ವೇಳೆ ರಷ್ಯಾ ಕ್ರಮವನ್ನು ಜಾಗತಿಕ ಸಮುದಾಯ ತೀವ್ರವಾಗಿ ಖಂಡಿಸಿತ್ತು. ಒಟ್ಟಿನಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಯುದ್ದ ಸದ್ಯದಲ್ಲೇ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಕ್ರೇನಿಯನ್ ಪಡೆಗಳು ದಕ್ಷಿಣದ ಮೂಲಕ ಮುಂದುವರೆದಿದ್ದು, ಈಗಾಗಲೇ ೪೧ ವಸಾಹತು ಪ್ರದೇಶಗಳನ್ನು ವಿಮೋಚನೆಗೊಳಿಸಿವೆ. ರಶ್ಯಾ ಪಡೆಗಳಿಂದ ಹಿಂಪಡೆದ ಪ್ರದೇಶಗಳತ್ತ ನಮ್ಮ ಯೋಧರು ತೆರಳುತ್ತಿದ್ದು, ಅಲ್ಲಿ ಇನ್ನೂ ಸ್ಫೋಟಗೊಳ್ಳದ ಸಾವಿರಾರು ಪ್ರಮಾಣದ ನೆಲಬಾಂಬ್ ಹಾಗೂ ಶಸ್ತ್ರಾಸ್ತ್ರಗಳನ್ನು ನಿರ್ಮೂಲನೆಗೊಳಿಸಿದ್ದಾರೆ.
-ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ಅಧ್ಯಕ್ಷ