೧೧೪೨ ಹಾಸ್ಟೆಲ್ ವಾರ್ಡನ್ ಭರ್ತಿಗೆ ಕ್ರಮ : ಪೂಜಾರಿ

ಬೆಂಗಳೂರು, ಸೆ. ೨೧-ರಾಜ್ಯದಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದಿಂದ ೧೧೪೨ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಪತ್ರ ಬರೆಯಲಾಗಿದೆ. ಅದರನ್ವಯ ೧೯೦ ಪುರುಷ ಹಾಗೂ ೨೦೨ ಮಹಿಳಾ ನಿಲಯ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಲೋಕಸೇವಾ ಆಯೋಗವು ಪ್ರಕಟಿಸಿದೆ. ಆದಷ್ಟು ಶೀಘ್ರ ಇವರುಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಸಮಾಯ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕುಮಾರ ಬಂಗಾರಪ್ಪ ರವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈಗ ಕೆಪಿಎಸ್ಸಿ ನೀಡುವ ಪಟ್ಟಿಯ ಪ್ರಕಾರ ಮೇಲ್ವಿಚಾರಕರನ್ನು ವಿದ್ಯಾರ್ಥಿನಿಲಯಗಳಿಗೆ ಸ್ಥಳ ನಿಯುಕ್ತಿ ಮಾಡುತ್ತೇವೆ. ಇದಾದ ನಂತರವೂ ಖಾಲಿ ಉಳಿದರೆ ಗುತ್ತಿಗೆ ಆಧಾರದ ಮೇಲೆ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಈಗ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳಿಗೆ ನಿಯೋಜನೆ ಮೇಲೆ ಮೇಲ್ವಿಚಾರಕರನ್ನು ನೇಮಿಸಿ ವಿದ್ಯಾರ್ಥಿನಿಲಯಗಳ ಮಕ್ಕಳ ಸುರಕ್ಷತೆ, ವಿದ್ಯಾಭ್ಯಾಸ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.