೧೦ ಸಾವಿರ ರೂ. ನೆರವಿಗೆ ಕೆಪಿಸಿಸಿ ಕಾರ್ಮಿಕರ ಘಟಕ ಆಗ್ರಹ

ಬೆಂಗಳೂರು, ಮೇ ೨೦: ಕೊರೊನಾ ಲಾಕ್‌ಡೌನ್‌ನಿಂದಾಗಿ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದು ಕಾರ್ಮಿಕ ವರ್ಗ ಅಪಾರ ತೊಂದರೆಗೆ ಸಿಲುಕಿದ್ದು, ಕಾರ್ಮಿಕರ ಅಭ್ಯುದಯಕ್ಕೆ ಹಣಕಾಸಿನ ನೆರವಿನ ಜೊತೆಗೆ ಇತರ ಸೌಲಭ್ಯಗಳನ್ನೂ ಸರ್ಕಾರ ನೀಡಬೇಕು ಲಾಕ್‌ಡೌನ್ ಸಂಕಷ್ಟದ ಕೆಲಸವಿಲ್ಲದ ಅವಧಿಗೆ ತಲಾ ಮೂರು ಸಾವಿರ ರೂ ಕಾರ್ಮಿಕರಿಗೆ ನೀಡುವುದಾಗಿ ಘೋಷಿಸಿದ್ದಾರೆ. ಕುಟುಂಬ ನಿರ್ವಹಣೆಗೆ ಈ ಮೊತ್ತ ಏನೇನೂ ಅಲ್ಲ. ಮಾಸಿಕ ತಲಾ ಹತ್ತು ಸಾವಿರ ರೂಪಾಯಿ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಪುಟ್ಟಸ್ವಾಮಿ ಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ, ಕೊರೊನಾ ಸಂಕಷ್ಟದಿಂದ ಬಡ ಮತ್ತು ಕಾರ್ಮಿಕ ವರ್ಗ ಪಾರಾಗಲು ಧನ ಸಹಾಯ ದೊರೆತಿಲ್ಲ. ಆಹಾರ, ವಸತಿ ಭದ್ರತೆಯೂ ಇಲ್ಲದಂತಹ ಸ್ಥಿತಿ ಇದೆ ಎಂದು ವಿವರಿಸಿದ್ದಾರೆ.
ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟಿರುವ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಕೂಲಿ ನಾಲಿ ಮಾಡಿ ದಿನದೂಡುವವರ ಕುಟುಂಬ ನಿರ್ವಹಣೆಗೆ ಈ ಮೊತ್ತ ಏನೇನೂ ಅಲ್ಲ. ಕೇವಲ ಮೂರು ಸಾವಿರ ರೂಪಾಯಿ ಘೋಷಿಸಿರುವುದು ಉಚಿತವಲ್ಲ. ಕಾರ್ಮಿಕರೂ ಕೂಡ ಯೋಗ್ಯ ಮಟ್ಟದ ಜೀವನ ನಡೆಸುವಂತಾಗಲು ಲಾಕ್‌ಡೌನ್ ಸಂಕಷ್ಟದ ಕೆಲಸವಿಲ್ಲದ ಅವಧಿಗೆ ಮಾಸಿಕ ತಲಾ ಹತ್ತು ಸಾವಿರ ರೂಪಾಯಿ ನೀಡಬೇಕು ಎಂದು ಕೆ.ಪುಟ್ಟಸ್ವಾಮಿ ಗೌಡ ಆಗ್ರಹಿಸಿದ್ದಾರೆ.