೧೦ ಸಾವಿರ ಕ್ರೀಡಾಪಟುಗಳಿಗೆ ನಾಳೆ ಲಸಿಕೆ : ಸಚಿವ ಗೌಡ


ಬೆಂಗಳೂರು,ಜೂ.೯- ರಾಜ್ಯಾದ್ಯಂತ ೧೦ ಸಾವಿರ ಕ್ರೀಡಾ ಪಟುಗಳಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಅಭಿಯಾನ ನಾಳೆ ಆರಂಭವಾಗಲಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ನಾರಾಯಣಗೌಡ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾ ಂಗಣದಲ್ಲಿ ನಾಳೆ ಕ್ರೀಡಾಪಟುಗಳಿಗೆ ಉಚಿತ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದ್ದು, ಎಲ್ಲ ಕ್ರೀಡಾ ಪಟುಗಳಿಗೂ ಲಸಿಕೆ ಸಿಗುವತನಕ ಅಭಿಯಾನ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯಸರ್ಕಾರವು ೧೮ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಆಧ್ಯತಾ ಗುಂಪಿಗೆ ಸೇರಿಸಿದ್ದು, ಈಗಾಗಲೇ ೨೨೦೦ ಕ್ರೀಡಾಪಟುಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇವರಿಗೆ ನಾಳೆ ಮತ್ತು ನಾಡಿದ್ದು ಲಸಿಕೆ ನೀಡಲಾಗುವುದು ಎಂದರು.
ಲಸಿಕೆಗಾಗಿ ಹೆಸರು ನೋಂದಾ ಯಿಸಿಕೊಳ್ಳದ ಕ್ರೀಡಾಪಟುಗಳು, ಕಂಠೀರವ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಕಚೇರಿಯಲ್ಲಿ ಅಥವಾ ಆಯಾ ಕ್ರೀಡಾ ಸಂಸ್ಥೆಗಳ ಮೂಲಕ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.