೧೦ ಕೋಟಿ ಮೌಲ್ಯದ ಗಾಂಜಾ ಜಪ್ತಿ

ಬೀದರ್, ಜೂ. ೨೫- ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೧.೧೮ ಕೋಟಿ ಮೌಲ್ಯದ ೧೧೮ ಕೆ.ಜಿ. ಗಾಂಜಾ ಹುಮನಾಬಾದ್ ಠಾಣೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ ೬೫ರಲ್ಲಿ ಶನಿವಾರ ವಶಪಡಿಸಿಕೊಂಡಿದ್ದಾರೆ.
ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರ ಬಳಿಯಿದ್ದ ೫ ಲಕ್ಷ ಮೌಲ್ಯದ ಒಂದು ಸ್ವಿಫ್ಟ್ ಕಾರು, ೨೫ ಸಾವಿರ ಮೌಲ್ಯದ ಮೂರು ಮೊಬೈಲ್ ಹಾಗೂ ೧೫ ಸಾವಿರ ನಗದು ಜಪ್ತಿ ಮಾಡಿದ್ದಾರೆ.
’ಹುಮನಾಬಾದ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೂಲಕ ಮಹಾರಾಷ್ಟ್ರದ ಕಡೆಗೆ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಕಾರಿನೊಳಗೆ ಬಾಕ್ಸ್‌ಗಳಲ್ಲಿ ಗಾಂಜಾ ಇಡಲಾಗಿತ್ತು. ಜಿಲ್ಲೆಯಲ್ಲಿ ಇತ್ತೀಚೆಗೆ ಭೇದಿಸಿದ ಅತಿದೊಡ್ಡ ಪ್ರಕರಣ ಇದಾಗಿದೆ. ಕಳೆದ ಒಂದು ವರ್ಷದಲ್ಲಿ ೧೮ ಪ್ರಕರಣಗಳನ್ನು ದಾಖಲಿಸಿಕೊಂಡು ೧೦.೧೭
ಕೋಟಿ ಮೌಲ್ಯದ ೧,೦೧೭ ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಡಿ ಜಿಲ್ಲೆ ಬೀದರ್ ಮೂಲಕ ಅಕ್ರಮವಾಗಿ ಮಾದಕ ವಸ್ತು ಸಾಗಾಟಕ್ಕೆ ಕೆಲವರು ಮಾರ್ಗ ಕಂಡುಕೊಂಡಿರುವುದು ಗೊತ್ತಾಗಿದೆ. ಇದಕ್ಕಾಗಿಯೇ ಸತತವಾಗಿ ತೀವ್ರ ನಿಗಾ ವಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ನಗರದಲ್ಲಿ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ’ವಶಕ್ಕೆ ಪಡೆದಿರುವ ಇಬ್ಬರಲ್ಲಿ ಒಬ್ಬ ವ್ಯಕ್ತಿ ನಮ್ಮ ರಾಜ್ಯಕ್ಕೆ ಸೇರಿದರೆ, ಇನ್ನೊಬ್ಬ ಉತ್ತರ ಪ್ರದೇಶದವನು. ಇವನು ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ. ತನಿಖೆ ನಂತರ ಇನ್ನೂಹೆಚ್ಚಿನ ಮಾಹಿತಿ ಗೊತ್ತಾಗಲಿದೆ’ ಎಂದು ತಿಳಿಸಿದರು.
ಎಎಸ್‌ಪಿ ಶಿವಾಂಶು ರಜಪೂತ, ಹುಮನಾಬಾದ್ ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಸುರೇಶ ಹಜ್ಜರ್ಗಿ, ತಹಶೀಲ್ದಾರ್ ಅಂಜುಂ ತಬಸುಂ, ಸಂಚಾರ ಠಾಣೆ ಪಿಎಸ್‌ಐ ಬಸವರಾಜ, ಎಎಸ್‌ಐಮಹಮ್ಮದ್ ಗೌಸೋದ್ದೀನ್, ಹೆಡ್ ಕಾನ್‌ಸ್ಟೆಬಲ್ ಲೋಕೇಶ್, ಕಾನ್‌ಸ್ಟೆಬಲ್‌ಗಳಾದ ಅನಿಲ್‌ಕುಮಾರ್, ಮಲ್ಲಪ್ಪ ಮಳ್ಳಿ, ಪ್ರಭುಲಿಂಗ ಸ್ವಾಮಿ, ಭಗವಾನ, ಸಂತೋಷ, ಪರಶುರಾಮ,ಬಾಲಾಜಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆಯಿಂದ ಅವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.