೧೦೩ ವರ್ಷದ ವಯೋವೃದ್ದೆ ಮನೆಯಿಂದಲೇ ಮತದಾನ

ಸಂಜೆವಾಣಿ ವಾರ್ತೆ
ಸಿಂಧನೂರು.ಏ.೨೬- ನೂರು ವರ್ಷಗಳನ್ನು ಪೂರೈಸಿದ (೧೦೩) ಶತಾಯುಷಿ ವಯೋವೃದ್ದೆ ಮಹಿಳೆ ಮನೆಯಿಂದಲೇ ೧೮ ನೇ ಲೋಕಸಭಾ ಚುನಾವಣೆಗೆ ಮತದಾನ ಮಾಡಿದಳು.
ಪ್ರಸ್ತುತ ಸಾರ್ವತ್ರಿಕ ಲೋಕಸಭಾ ಚುನಾವಣಾ ೨೦೨೪ ರ ಅಂಗವಾಗಿ ಭಾರತ ಚುನಾವಣಾ ಆಯೋಗವು ವಿಶೇಷವಾಗಿ ೮೫+ ವರ್ಷ ಮೇಲ್ಪಟ್ಟ ಹಿರಿಯನಾಗರೀಕರಿಗೆ ಹಾಗೂ ವಿಶೇಷ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಇದರ ಭಾಗವಾಗಿ ೦೮-ಕೊಪ್ಪಳ ಲೋಕಸಭಾ ಕ್ಷೇತ್ರದ ಸಿಂಧನೂರು ವಿಧಾನ ಸಭಾ ಕ್ಷೇತ್ರದ ಹನುಮಾನ ನಗರ ಕ್ಯಾಂಪ್ ನಲ್ಲಿ ೧೦೩ ವರ್ಷದ ಹಿರಿಯ ಜೀವಿ ಶ್ರೀಮತಿ ಅನ್ನಪೂರ್ಣಮ್ಮ ಗಂ ಕುರೇಶ್ ರೆಡ್ಡಿ ಭಾಗ ಸಂಖ್ಯೆ ೧೮೯ ರ ಮತದಾರಳು ಮತದಾನ ಮಾಡಿದರು. ಈ ವಯೋವೃದ್ಧ ಮಹಿಳಾ ಮತದಾರೆ ವಿಶೇಷವೆಂದರೆ ತಮ್ಮ ಜೀವನದ ಅಪರೂಪದ ಘಟನೆಯನ್ನು ಮೆಲುಕು ಹಾಕಿಕೊಂಡರು .
೧೯೪೭ ರಲ್ಲಿ ಆಂಧ್ರಪ್ರದೇಶದ ಗುಂಟೂರ್ ಜಿಲ್ಲೆಯ ’ತೆನಾಲಿ ’ಯಲ್ಲಿ ಮಹಾತ್ಮಾ ಗಾಂಧೀಜಿಯವರೊಂದಿಗೆ ಸಂವಾದ ಮಾಡಿ ಮಹಿಳೆಯರಿಗೆ ಮತದಾನ ಅವಕಾಶ ಕಲ್ಪಿಸಿದ್ದು ಸದುಪಯೋಗಪಡಿಸಿಕೊಳ್ಳುವಂತೆ ಮಹಾತ್ಮ ಗಾಂಧೀಜಿಯವರು ತಿಳಿಸಿರುವುದನ್ನು ನೆನಪಿಸಿಕೊಂಡು ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಮಹೇಶ್ ಪೋತದಾರ್, ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅರುಣ್ ಕುಮಾರ ದೇಸಾಯಿ, ಪೌರಾಯುಕ್ತ ಮಂಜುನಾಥ ಗುಂಡೂರ್, ಸೆಕ್ಟರ್ ಅಧಿಕಾರಿ ವಿನಯ್, ಗ್ರಾಮ ಆಡಳಿತಾಧಿಕಾರಿ ರಮೇಶಬಾಬು, ಮತಗಟ್ಟೆ ಅಧಿಕಾರಿ, ಬಿಎಲ್‌ಓ, ಗ್ರಾಮ ಸಹಾಯಕರು ಇತರರು ವಿಶೇಷ ಸಂದರ್ಭಕ್ಕೆ ಸಾಕ್ಷಿಯಾದರು.